KARNATAKA
ಹೊನ್ನಾವರ – ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತ
ಹೊನ್ನಾವರ ಜುಲೈ 07: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಮಳೆಯ ಅವಾಂತರಗಳ ಬಗ್ಗೆ ವರಿದಿಯಾಗುತ್ತಿದೆ. ಈ ನಡುವೆ ಹೊನ್ನಾವರದ ಕರ್ನಲ್ ಹಿಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಬಂಡೆ ಸಮೇತ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಗುಡ್ಡದ ಮಣ್ಣನ್ನು ತೆಗೆದು ರಸ್ತೆ ಮಾಡಿದ್ದ ಐಆರ್ ಬಿ ಕಂಪೆನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿ ಪದೇ ಪದೇ ಗುಡ್ಡ ಕುಸಿತದ ಪ್ರಕರಣಗಳು ವರದಿಯಾಗುತ್ತಿದೆ.
ರವಿವಾರ ಮುಂಜಾನೆಯಿಂದಲೇ ಮುಂಗಾರು ಮಳೆಯ ಆರ್ಭಟ ತಾಲೂಕಿನಲ್ಲಿ ಮುಂದುವರೆದಿದ್ದು, ಮುಂಜಾನೆ 7.30 ಸುಮಾರಿಗೆ ಬೃಹತ್ ಬಂಡೆಗಲ್ಲು ಸಮೇತ ಮಣ್ಣು, ಮರಗಳು ಹೆದ್ದಾರಿಯ ಮೇಲೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಐಆರ್ ಬಿ ಸಿಬ್ಬಂದಿಗಳು ಜೆಸಿಬಿ ಮೂಲಕ ಹೆದ್ದಾರಿ ಮೇಲೆ ಬಿದ್ದ ಮಣ್ಣು ತೆರವು ಮಾಡುವ ಕಾರ್ಯ ಕೈಗೊಂಡಿದ್ದಾರೆ.