KARNATAKA
ಕಾಂಗ್ರೆಸ್‌ನವರು ನನ್ನ ಮೇಲೆ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಬೆಂಗಳೂರು ಅಗಸ್ಟ್ 26: ಬಿಜೆಪಿಯ ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ನವರು ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ. ಅತ್ಯಾಚಾರ ಆಗಿದ್ದು ಅಲ್ಲಿ, ಆದರೆ ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮದವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪ್ರತಿಕ್ರಿಯೆ ಕೇಳಿದಾಗ ಅವರು ಬೇಜವಾಬ್ದಾರಿ ರೀತಿಯ ಹೇಳಿಕೆ ನೀಡಿದ್ದಾರೆ. ಮೈಸೂರು ನಗರದ ಹೊರವಲಯದಲ್ಲಿ ಅತ್ಯಾಚಾರವಾಗಿದ್ದು, ಕಾಂಗ್ರೆಸ್ ನವರು ನನ್ನನ್ನು ಗೃಹ ಸಚಿವರನ್ನು ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ನೋಡುತ್ತಿದ್ದಾರೆ. ಇದು ಅಮಾನುಷವಾದ ಕೆಲಸ, ಎಲ್ಲೋ ಈ ರೀತಿಯ ಪ್ರಕರಣಗಳು ನಡೆದಾಗ ನಾವೆಲ್ಲರೂ ಒಟ್ಟಾಗಿ ಮಾನವೀಯ ದೃಷ್ಟಿಯಿಂದ ನೋಡಿ ಪತ್ತೆಹಚ್ಚುವುದು ಬಿಟ್ಟು ರಾಜಕೀಯ ಲಾಭ ಮಾಡಿಕೊಳ್ಳಲು ನೋಡುತ್ತಿರುವುದು ಸರಿಯಲ್ಲ ಎಂದರು.

ಮೊನ್ನೆ ಮಂಗಳವಾರ ಸಾಯಂಕಾಲ 7-7.30 ಹೊತ್ತಿನಲ್ಲಿ ಯುವಕ-ಯುವತಿ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿಗೆ ಅವರು ಹೋಗಬಾರದಾಗಿತ್ತು, ಯಾರನ್ನೂ ಹೋಗಬೇಡಿ ಎಂದು ಪೊಲೀಸರಿಗೆ ಪದೇ ಪದೇ ತಡೆಯಲು ಆಗುತ್ತದೆಯೇ, ನಾನು ಇಂದು ಮೈಸೂರಿಗೆ ಹೋಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಎಲ್ಲಿ ಕುಂದುಕೊರತೆಯಿದೆ ಎಂದು ನೋಡುತ್ತೇನೆ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುತ್ತೇವೆ ಎಂದರು,