LATEST NEWS
ಗೃಹರಕ್ಷಕ ದಳದ ಸಿಬ್ಬಂದಿಗಳಿಂದ ಸಮಾಜಕ್ಕೆ ಉತ್ತಮ ಸೇವೆ: ಎಸ್ಪಿ ಡಾ. ಅರುಣ್ ಕೆ
ಉಡುಪಿ, ಡಿಸೆಂಬರ್ 12 : ಗೃಹರಕ್ಷಕ ದಳವು ಪೊಲೀಸ್ ಇಲಾಖೆಯ ಒಂದು ಪ್ರಮುಖ ಅಂಗವಾಗಿದ್ದು, ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ, ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಹೇಳಿದರು. ಅವರು ಇಂದು ನಗರದ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಜಿಲ್ಲಾ ಗೃಹರಕ್ಷಕ ದಳ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೊಲೀಸರು ಎಲ್ಲಾ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಸಂದರ್ಭದಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿಕೊಂಡು ಬಂದಿರುವ ಇಲಾಖೆ ಗೃಹ ರಕ್ಷಕದಳ. ಗೃಹರಕ್ಷಕದಳದ ಸಿಬ್ಬಂದಿಗಳು ಪ್ರವಾಸೋದ್ಯಮ, ಕೆ.ಎಸ್.ಆರ್.ಟಿ.ಸಿ ಸೇರಿದಂತೆ
ಎಲ್ಲಾ ಇಲಾಖೆಗಳಲ್ಲಿಯೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಬೇರೆ ಇಲಾಖೆಯನ್ನು ಹೋಲಿಸಿದರೆ ಗೃಹ ರಕ್ಷಕದಳ ಇಲಾಖೆಯು ಪೊಲೀಸ್ ಇಲಾಖೆಯನ್ನು ಅತಿ ಸಮೀಪದಿಂದ ತಿಳಿದಿದೆ. ಯಾವುದೇ ಸಮಯದಲ್ಲಾದರೂ ಪೊಲೀಸ್ ಇಲಾಖೆಯ ಕೆಲಸಗಳಿಗೆ ಗೃಹರಕ್ಷಕರು ಸಹಕಾರ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳ ಸೆಕೆಂಡ್ ಇನ್ ಕಮಾಂಡೆAಟ್ ಕೆ. ಸಿ. ರಾಜೇಶ್ ಮಾತನಾಡಿ, ವಿವಿಧ ಇಲಾಖೆಗಳಿಗಾಗಿ ಗೃಹರಕ್ಷಕರು ಕಾರ್ಯನಿರ್ವಹಿಸುವಾಗ ಆ ಇಲಾಖೆಯ ಗೌರವ ಕಾಪಾಡುವುದರೊಂದಿಗೆ ನಮ್ಮ ಇಲಾಖೆಯ ಗೌರವವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಕೆಲಸದಲ್ಲಿ ದಕ್ಷತೆ, ಪ್ರಾಮಾಣಿಕತೆ, ಬದ್ಧತೆಯನ್ನು ತೋರಿಸಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರು. ಕಾರ್ಯಕ್ರಮದ ಅಂಗವಾಗಿ ಗೃಹರಕ್ಷಕ ದಳ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಾಪು ಘಟಕದ ರಾಜೇಂದ್ರ, ಮಣಿಪಾಲ ಘಟಕದ ಮಾಝಿನ್ ಉಮ್ಮರ್ ಫಾರೂಕ್ ಹಾಗೂ ಸವಿತಾ, ಕುಂದಾಪುರ ಘಟಕದ ಸಂದೀಪ್ ದಾಸ್ ಮತ್ತು ಉಡುಪಿ ಘಟಕದ ಜಯಂತಿ ಅವರುಗಳನ್ನು ಸನ್ಮಾನಿಸಲಾಯಿತು.