DAKSHINA KANNADA
ಹಿಂದೂ ನಾಯಕರ ಮೇಲೆ ದೌರ್ಜನ್ಯ, ನ್ಯಾಯ ಸಿಗದೇ ಹೋದಲ್ಲಿ ಠಾಣೆಗೆ ಮುತ್ತಿಗೆ,ಬಂದ್ ಗೆ ಕರೆ- ಹಿಂಜಾವೇ ಎಚ್ಚರಿಕೆ
ಹಿಂದೂ ನಾಯಕರ ಮೇಲೆ ದೌರ್ಜನ್ಯ, ನ್ಯಾಯ ಸಿಗದೇ ಹೋದಲ್ಲಿ ಠಾಣೆಗೆ ಮುತ್ತಿಗೆ,ಬಂದ್ ಗೆ ಕರೆ- ಹಿಂಜಾವೇ ಎಚ್ಚರಿಕೆ
ಪುತ್ತೂರು, ಡಿಸೆಂಬರ್ 21: ಪುತ್ತೂರಿನಲ್ಲಿ ಹಿಂದೂ ನಾಯಕರ ಮೇಲೆ ಎಸಗಿದ ಅವಮಾನ ಹಾಗೂ ಹಲ್ಲೆಗೆ ನ್ಯಾಯ ದೊರಕದೇ ಇದ್ದಲ್ಲಿ ಸಂಪ್ಯ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕುವ ಹಾಗೂ ಪುತ್ತೂರು ಬಂದ್ ಕರೆ ನೀಡುವುದಾಗಿ ಹಿಂದೂ ಜಾಗರಣ ವೇದಿಕೆಯ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಎಚ್ಚರಿಸಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಯೂಸುಫ್ ಎನ್ನುವ ವ್ಯಕ್ತಿ ಮಾನಭಂಗಕ್ಕೆ ಯತ್ನಿಸಿದ್ದಾನೆ.
ಡಿಸೆಂಬರ್ 18 ರಂದು ನಡೆದ ಈ ಘಟನೆಯ ಬಳಿಕ ಸಂಪ್ಯ ಪೋಲೀಸರು ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳು ಪೋಲೀಸ್ ಠಾಣೆಯ ಎದುರು ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ಪೋಲೀಸರು ಲಾಠಿಚಾರ್ಚ್ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಆದರೆ ಸಂಪ್ಯ ಪೋಲೀಸರು ಹಿಂದೂ ಸಂಘಟನೆಯ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅಜಿತ್ ರೈ ಹೊಸಮನೆ ಎನ್ನುವವರ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದರೂ ಇಷ್ಟರ ತನಕ ಪೋಲೀಸರು ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡಿಲ್ಲ.
ಒಂದು ವೇಳೆ ಇಂದು ಮಧ್ಯಾಹ್ನ 3 ಗಂಟೆಯ ಒಳಗೆ ಆಸ್ಪತ್ರೆಗೆ ಬಂದು ಗಾಯಾಳುವಿನ ಹೇಳಿಕೆ ಪಡೆದುಕೊಂಡಿಲ್ಲದಿದ್ದರೆ ಹಾಗೂ ಹಿಂದೂ ಸಂಘಟನೆಗಳಿಗೆ ನ್ಯಾಯ ಒದಗಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಂಪ್ಯ ಪೋಲೀಸ್ ಠಾಣೆಗೆ ಮುತ್ತಿಗೆ ಹಾಗೂ ಪುತ್ತೂರು ಬಂದ್ ಗೂ ಕರೆ ನೀಡುವುದಾಗಿ ಎಚ್ಚರಿಸಿದರು.
ಈ ಹಿಂದೆ ಗೋಸಾಗಾಟಕ್ಕೆ ಸಂಬಂಧಿಸಿದಂತೆ ಸಂಪ್ಯ ಪೋಲೀಸ್ ಠಾಣೆಯ ಸಿಬ್ಬಂದಿಗಳಾದ ಚಂದ್ರ, ಕರುಣಾಕರ್ ಹಾಗೂ ಸುರೇಶ್ ಗೌಡ ಹಾಗೂ ಎಸೈ ಅಬ್ದುಲ್ ಖಾದರ್ ವಿರುದ್ಧ ಪ್ರತಿಭಟನೆ ನಡೆಸಿದರ ಪ್ರತೀಕಾರವಾಗಿ ಈ ರೀತಿ ಹಲ್ಲೆ ನಡೆಸಿರುವುದಾಗಿ ಪೋಲೀಸರು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗಾಯಾಳು ಅಜಿತ್ ರೈ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರು ಗಾಯಾಳುವಿಗೆ ಗಂಭೀರ ಗಾಯವಾಗಿರುವ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ವರದಿಯನ್ನೂ ನೀಡಿದ್ದಾರೆ.
ಆದರೆ ಇದೀಗ ಪೋಲೀಸರು ಸರಕಾರಿ ಆಸ್ಪತ್ರೆಯ ವೈದ್ಯರಿಗೆ ಒತ್ತಡ ತಂದು ಆ ವರದಿಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.