DAKSHINA KANNADA
ಹಿಂದೂ ಯುವಸೇನೆಯ ‘ಮಂಗಳೂರು ಗಣೇಶೋತ್ಸವ’ ಶೋಭಾಯಾತ್ರೆ ಸಂಪನ್ನ
ಮಂಗಳೂರು ಸೆಪ್ಟೆಂಬರ್ 16: ಹಿಂದೂ ಯುವಸೇನೆ ವತಿಯಿಂದ ಕಳೆದ ಏಳು ದಿನಗಳ ಕಾಲ ನಗರದ ನೆಹರೂ ಮೈದಾನದಲ್ಲಿ ಪೂಜಿಸಲ್ಪಟ್ಟ ಶ್ರಿ ವಿಘ್ನವಿನಾಯಕ ಮೂರ್ತಿಯ ವೈಭವದ ಶೋಭಾಯಾತ್ರೆ ಸೋಮವಾರ ಸಂಜೆ ನಡೆಯಿತು.
ಈ ಏಳು ದಿನಗಳಲ್ಲಿ ಗಣೇಶನಿಗೆ ಪೂಜೆ ಮತ್ತು ನೈವೇದ್ಯಗಳ ಅರ್ಪಣೆಯಾಯಿತು . ಪ್ರತಿದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನೆಹರು ಮೈದಾನದ ಛತ್ರಪತಿ ಶಿವಾಜಿ ಮಂಟಪ ದಿಂದ ಹೊರಟ ಮೆರವಣಿಗೆ ಎ.ಬಿ.ಶೆಟ್ಟಿ ವೃತ್ತ, ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ನವಭಾರತ ವೃತ್ತ, ಡೊಂಗರಕೇರಿ ಮೂಲಕ ಕಾರ್ ಸ್ಟ್ರೀಟ್‌ನಲ್ಲಿ ಸಮಾಪನಗೊಂಡು ಕಾರ್ ಸ್ಟ್ರೀಟ್‌ನಲ್ಲಿರುವ ಮಹಾಮ್ಮಾಯಿ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು .
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಯಿಂದ ಹಾಗೂ ಹೊರ ಜಿಲ್ಲೆಗಳಿಂದಲೂ ಒಂದು ಲಕ್ಷಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಚೆಂಡೆ, ನಾಸಿಕ್ ಬ್ಯಾಂಡ್ ಗಳು ಮೆರವಣಿಗೆಗೆ ಮತ್ತಷ್ಟು ರಂಗು ತುಂಬಿದವು.
ಮೆರವಣಿಗೆ ಆರಂಭಕ್ಕೂ ಮುನ್ನ ನೆಹರು ಮೈದಾನಿನಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಮುಂಜಾಗೃತಾ ಕ್ರಮವಾಗಿ ನಗರದಾದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು.