LATEST NEWS
ಜಿಲ್ಲಾಧಿಕಾರಿ ದೂರಿಗೆ ಹೆದರಿ ಬಂದಿಲ್ಲ..ಇಂಥ ಸಾವಿರ ದೂರುಗಳನ್ನು ಎದುರಿಸಲೂ ಸಿದ್ಧ

ಮಂಗಳೂರು ನವೆಂಬರ್ 25: ಕಾರಿಂಜ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರ ಇದೀಗ ಭಾರೀ ವಿವಾದ ಸೃಷ್ಠಿಸಿದ್ದು, ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ವಿರುದ್ಧ ದೂರು ದಾಖಲಿಸುವ ಮೂಲಕ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಜಗದೀಶ್ ಕಾರಂತರ ಭಾಷಣದಿಂದ ಜಿಲ್ಲಾಧಿಕಾರಿಯ ಘನತೆಗೆ ಧಕ್ಕೆಯಾಗಿರಬಹುದು ಆದರೆ ಕಾರಂತ ಅವರ ಮಾತುಗಳು ಸ್ಥಳೀಯ ನಿವಾಸಿಗಳ ಆಕ್ರೋಶವನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಜಿಲ್ಲಾಧಿಕಾರಿ ಅರಿಯಬೇಕು.
ಕಾರಂತರ ವಿರುದ್ಧ ನೀಡಿರುವ ದೂರನ್ನು ಜಿಲ್ಲಾಧಿಕಾರಿ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ. ದೂರಿಗೆ ಹೆದರಿ ನಾವು ಈ ಒತ್ತಾಯ ಮಾಡುತ್ತಿಲ್ಲ. ಇಂಥ ಸಾವಿರ ದೂರುಗಳನ್ನು ಎದುರಿಸಲೂ ಸಿದ್ಧ, ಆದರೆ, ಜನರ ಭಾವನೆಯನ್ನು ಗೌರವಿಸಬೇಕಾದ್ದು ಜಿಲ್ಲಾಧಿಕಾರಿಯ ಹೊಣೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದ್ಧರಾಗಿ ಅವರು ಆ ಕೆಲಸ ಮಾಡಬೇಕು’ ಎಂದರು.
