DAKSHINA KANNADA
ಚೀನಾ ಭಾರತ ಸ್ನೇಹ ಸಮರ : ಸೆ.9 ಕ್ಕೆ ಕಾರ್ಯಾಗಾರ

ಮಂಗಳೂರು, ಸೆಪ್ಟೆಂಬರ್ 01 : “ಚೀನಾ ಭಾರತ ಸ್ನೇಹ ಸಮರ ” ವಿಷಯ ಕುರಿತು ಸೆ. 9 ಕ್ಕೆ ಕಾರ್ಯಾಗಾರ ಆಯೋಜಿಸಲಾಗಿದೆ . ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ವತಿಯಿಂದ ಇದೇ ತಿಂಗಳ 9ನೇ ತಾರೀಖು ಸಂಜೆ 5 ಗಂಟೆಗೆ ಪ್ರತಾಪ ನಗರದ ಸಂಘನಿಕೇತನದಲ್ಲಿ “ಚೀನಾ ಭಾರತ ಸ್ನೇಹ ಸಮರ” ಎಂಬ ವಿಷಯದ ಮೇಲೆ ವಿಶೇಷ ಕಾರ್ಯಾಗಾರ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ್ ಬಿ.ಎಲ್, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಹಾಗೂ ಶ್ರೀ ಭಾರ್ಗವ ತಂತ್ರಿ, ಅಧ್ಯಕ್ಷರು ICAI ಮಂಗಳೂರು ಶಾಖೆ ಭಾಗವಹಿಸಲಿದ್ದಾರೆ.
ಚೀನಾ ಭಾರತದೊಂದಿಗೆ ಎಷ್ಟೇ ಸ್ನೇಹದಿಂದ,ಇರುವಂತೆ ತೋರಿದರೂ ಹಿಂದಿನಿಂದ ಚೂರಿ ಹಾಕುವ ಸಂಸ್ಕೃತಿಯನ್ನು ಎಂದಿಗೂ ಬಿಟ್ಟಿಲ್ಲ. ಆದರೂ ನೆಹರೂ ಸರ್ಕಾರ “ಹಿಂದೀ ಚೀನಿ ಭಾಯಿ ಭಾಯಿ” ಎಂದು ಹೆಗಲ ಮೇಲೆ ಕೈ ಹಾಕಿ ದೋಸ್ತಿ ಬೆಳೆಸಿದರೆ, ಚೀನಾ ಮಾತ್ರ ಭಾರತದ ಜುಟ್ಟನ್ನು ತನಗಿಷ್ಟ ಬಂದಂತೆ ಹಿಡಿದು 1962 ರಲ್ಲಿ ಯುದ್ಧ ಸಾರಿದ್ದು ಇತಿಹಾಸ.
1962ರ ಚಿತ್ರಣವನ್ನೇ ಮುಂದಿಟ್ಟುಕೊಂಡು ಪದೇಪದೇ ಭಾರತವನ್ನು ಕೆಣಕುತ್ತಿರುವ ಚೀನಾ ಸವಾಲು, ಬೆದರಿಕೆಗಳನ್ನು ಹಾಕುತ್ತಿದೆ. ಹಾಗೆಂದು ಈಗಿನ ಭಾರತವೇನೂ ಸುಮ್ಮನೆ ಕುಳಿತಿಲ್ಲ, ರಾಜತಾಂತ್ರಿಕ ನೈಪುಣ್ಯದ ಜೊತೆಗೆ ಸೂಕ್ಷ್ಮ ಹೆಜ್ಜೆಗಳನ್ನು ಇಡುವುದರ ಮೂಲಕ ಚೀನಾದ ಸವಾಲಿಗೆ ಪ್ರತಿಸವಾಲು ಒಡ್ಡುತ್ತಿದೆ. ಸಮಸ್ತ ಭಾರತೀಯರು ಚೀನಾ ವಿರುದ್ಧ ಸೆಟೆದು ನಿಂತು, ಚೀನಾ ವಸ್ತುಗಳ ಬಹಿಷ್ಕಾರಕ್ಕೆ ನಿಂತಿದ್ದಾರೆ. ಈ ಹಂತದಲ್ಲಿ ಭಾರತೀಯರಲ್ಲಿ ಸ್ವದೇಶೀ ಚಿಂತನೆ ಮೂಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಸರಿ. ನಮ್ಮ ಆರ್ಥಿಕತೆಯಿಂದಲೇ ಬೆಳೆದು ಬೀಗುತ್ತಿರುವ ಚೀನಾಗೆ ಪಾಠ ಕಲಿಸಲು ಯುದ್ಧವೇ ಬೇಕಿಲ್ಲ, ತಂತ್ರವೂ ಸಾಕು. ಇಂತಹ ಹತ್ತು ಹಲವು ವಿಷಯಗಳ ಬಗ್ಗೆ ವಿಸ್ಕೃತ ಚರ್ಚೆ ಈ ಸಂದರ್ಭದಲ್ಲಿ ನಡೆಯಲಿದೆ.
