LATEST NEWS
ತಾಕತ್ತಿದ್ದರೆ ಅಮೇರಿಕಾದಲ್ಲಿ ಕೇಸು ದಾಖಲಿಸಿ ಎಂದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆ..ಅದಾನಿ ಷೇರು ಮತ್ತೆ ಕುಸಿತದ ಹಾದಿಯಲ್ಲಿ

ಮುಂಬೈ ಜನವರಿ 27: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ವರದಿ ಬಹಿರಂಗ ಆದ ಬೆನ್ನಲ್ಲೇ ಅದಾನಿ ಸಮೂಹದ ಲಿಸ್ಟೆಡ್ ಕಂಪನಿಗಳ ಷೇರುಗಳು ಶುಕ್ರವಾರ ಮತ್ತಷ್ಟು ಕುಸಿತವನ್ನು ಕಂಡಿವೆ.
ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ದಶಕಗಳಿಂದ ಲಜ್ಜೆಯಿಲ್ಲದೆ ಲೆಕ್ಕಪತ್ರ ವಂಚನೆ ಮತ್ತು ಷೇರು ತಿರುಚುವಿಕೆಯಲ್ಲಿ ತೊಡಗಿದೆ ಎಂದು ಹಿಂಡನ್‌ಬರ್ಗ್ ತನ್ನ ಸಂಶೋಧನಾ ವರದಿಯಲ್ಲಿ ಆರೋಪಿಸಿತ್ತು. ತನ್ನ ಆರೋಪಕ್ಕೆ ಬದ್ಧವಾಗಿರುವುದಾಗಿ ಹೇಳಿರುವ ಸಂಶೋಧನಾ ಸಂಸ್ಥೆ, ಕಾನೂನು ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ದಾಖಲೆಗಳಿಗೆ ಬೇಡಿಕೆ ಇಡುವುದಾಗಿ ತಿರುಗೇಟು ನೀಡಿದೆ.
ಈ ಹಿನ್ನಲೆ ಷೇರು ಮಾರುಕಟ್ಟೆಯಲ್ಲಿ ಅದಾನಿ ಶೇರುಗಳು ಕುಸಿತದ ಹಾದಿಯಲ್ಲಿದ್ದು, ಅದಾನಿ ಟ್ರಾನ್ಸ್‌ಮಿಷನ್ ಲಿಟಿಟೆಡ್ ಶೇ 19.2, ಅದಾನಿ ಟೋಟಲ್ ಗ್ಯಾಸ್ ಶೇ 19.1 ಮತ್ತು ಅದಾನಿ ಗ್ರೀನ್ ಎನರ್ಜಿ ಶೇ 15.8 ರಷ್ಟು ಕುಸಿದಿದೆ. ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗಿರುವ ಅದಾನಿ ಸಮೂಹದ ಏಳು ಕಂಪನಿಗಳ ಮಾರುಕಟ್ಟೆ ಮೌಲ್ಯವು ಬುಧವಾರದಂದು 10.73 ಬಿಲಿಯನ್ ಡಾಲರ್‌ನಷ್ಟು ಇಳಿಕೆಯಾಗಿದೆ.

ಅದಾನಿ ಗ್ರೂಪ್‌ನಿಂದ ಕಾನೂನು ಕ್ರಮದ ಬೆದರಿಕೆಗೆ ಒಳಗಾಗಿರುವ ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್, ಕೇಸು ದಾಖಲಿಸುವುದಾದರೆ ದಾಖಲಿಸಿ ಎಂದು ಬಹಿರಂಗ ಸವಾಲೆಸೆದಿದೆ. ನಾವು ನಮ್ಮ ವರದಿಯನ್ನು ಬಿಡುಗಡೆ ಮಾಡಿ 36 ಗಂಟೆ ಕಳೆದಿದ್ದು ನಾವು ಎತ್ತಿದ ಒಂದೇ ಒಂದು ಪ್ರಶ್ನೆಗೂ ಅದಾನಿ ಸರಿಯಾದ ಉತ್ತರ ನೀಡಿಲ್ಲ,” ಎಂದು ಹಿಂಡನ್‌ಬರ್ಗ್ ರಿಸರ್ಚ್ ಟ್ವಿಟರ್‌ನಲ್ಲಿ ತಿಳಿಸಿದೆ. “ನಮ್ಮ ವರದಿಯ ಕೊನೆಯಲ್ಲಿ, ಕಂಪನಿಗೆ ಪಾರದರ್ಶಕವಾಗಿರಲು ಅವಕಾಶವನ್ನು ನೀಡುವ 88 ನೇರ ಪ್ರಶ್ನೆಗಳನ್ನು ಕೇಳಿದ್ದೆವು. ಆದರೆ ಇಲ್ಲಿಯವರೆಗೆ ಅದಾನಿ ಈ ಯಾವ ಪ್ರಶ್ನೆಗಳಿಗೂ ಉತ್ತರಿಸಿಲ್ಲ,” ಎಂದು ಸಂಶೋಧನಾ ಸಂಸ್ಥೆ ಆರೋಪಿಸಿದೆ.