LATEST NEWS
ಉಡುಪಿ ಎಂಜಿಎಂ ನಲ್ಲಿ ತಾರಕಕ್ಕೇರಿದ ಹಿಜಬ್ ಕೇಸರಿ ಪೈಟ್ – ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ

ಉಡುಪಿ ಫೆಬ್ರವರಿ 08 : ಹಿಜಬ್ ವಿವಾದ ಪ್ರಾರಂಭವಾದ ಉಡುಪಿಯಲ್ಲಿ ಇದೀಗ ಗಲಾಟೆ ಮತ್ತೆ ಹೆಚ್ಚಾಗಿದ್ದು, ಹಿಜಾಬ್, ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ನಿನ್ನೆ ಎಂಜಿಎಂ ಕಾಲೇಜಿಗೆ ಪ್ರವೇಶವಾದ ಈ ಹಿಜಾಬ್, ಕೇಸರಿ ಶಾಲು ವಿವಾದ ಇಂದು ಹೆಚ್ಚಾಗಿದ್ದು, ಮುಸ್ಲಿಂ ವಿಧ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ಬಂದರೆ, ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಆಗಮಿಸಿದ್ದು ಉದ್ವಿಗ್ವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವೇಳೆ ಆಡಳಿತ ಮಂಡಳಿ ಗೇಟ್ ಗೆ ಬೀಗ ಹಾಕಿದ್ದು, ಕೇಸರಿ ಪೇಟ ತೊಟ್ಟ ವಿದ್ಯಾರ್ಥಿಗಳು ಹಾಗೂ ಬುರ್ಖಾ ತೊಟ್ಟ ವಿದ್ಯಾರ್ಥಿನಿಯರು ಆವರಣದ ಹೊರಗಿಂದ ಬೀಗ ತೆಗೆಯಲು ಕಾಯುತ್ತಿದ್ದಾರೆ.

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್ ಆಗಮಿಸಿದ್ದು, ಪ್ರಾಧ್ಯಾಪಕರು ಕೂಡ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರಾಂಶುಪಾಲರ ಮಾತಿಗೆ ವಿಧ್ಯಾರ್ಥಿಗಳು ಬಗ್ಗದ ಹಿನ್ನಲೆ ಪ್ರಾಂಶುಪಾಲರು ಕಾಲೇಜಿಗೆ ರಜೆ ಘೋಷಿಸಿದ್ದಾರೆ.
ವಿಧ್ಯಾರ್ಥಿಗಳಿಗೆ ತಿಳಿಸಿದ ಅವರು ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಮನೆಗಳಿಗೆ ತೆರಳಿ, ನಿಮ್ಮ ಓದಿನ ಬಗ್ಗೆ ನೀವು ಗಮನ ಕೊಡಿ, ಕಾಲೇಜು ಆವರಣದ ಹೊರಗೆ ನಿಲ್ಲ ಬೇಡಿ, ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆಯನ್ನು ನೀಡಲಾಗಿದೆ. ಆಡಳಿತ ಮಂಡಳಿ, ಜಿಲ್ಲಾಡಳಿತದ ಜೊತೆ ನಾವು ಚರ್ಚೆ ಮಾಡುತ್ತೇವೆ. ಯಾವುದೇ ಗೊಂದಲಕ್ಕೆ ಆಸ್ಪದ ಕೊಡಬೇಡಿ ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ ನಾಯ್ಕ್ ಮನವಿ ಮಾಡಿದ್ದಾರೆ