LATEST NEWS
ಹಿಜಾಬ್ ವಿವಾದ – ಕೋರ್ಟ್ ತೀರ್ಪು ಬರುವವರೆಗೆ ಉಳ್ಳಾಲ ಭಾರತ್ ಪಿಯು ಕಾಲೇಜಿಗೆ ರಜೆ ಘೋಷಣೆ

ಮಂಗಳೂರು ಫೆಬ್ರವರಿ 25: ರಾಜ್ಯ ಹೈಕೋರ್ಟ್ ನಲ್ಲಿ ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ವಾದ ವಿವಾದಗಳು ನಡೆಯುತ್ತಿದ್ದಂತೆ ಇದೀಗ ಮಂಗಳೂರಿನ ಉಳ್ಳಾಲದ ಭಾರತ್ ಪಿಯು ಕಾಲೇಜಿನಲ್ಲಿ ಹಿಜಾಬ್ ವಿವಾದ ಬುಗಿಲೆದ್ದಿದ್ದು, ನ್ಯಾಯಾಲಯದಿಂದ ತೀರ್ಪು ಬರುವವರೆಗೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಹೈಕೋರ್ಟ್ ಆದೇಶದಂತೆ ಶಿಕ್ಷಣ ಇಲಾಖೆಯ ವಿಧ್ಯಾರ್ಥಿಗಳಿಗೆ ಹಿಜಬ್ ಧರಿಸದೆ ತರಗತಿ ಬರುವಂತೆ ಆದೇಶಿಸಿದೆ. ಈ ಹಿನ್ನಲೆ ಉಳ್ಳಾಲದ ಭಾರತ್ ಪಿಯು ಕಾಲೇಜು ಆಡಳಿತ ಸಮಿತಿ ವಿಧ್ಯಾರ್ಥಿನಿಯರಿಗೆ ಹಿಜಬ್ ತೆಗೆದು ತರಗತಿಗೆ ಬರಲು ಸೂಚಿಸಿದೆ ಆದರೆ ಸಮಿತಿಯ ಆದೇಶವನ್ನು ವಿದ್ಯಾರ್ಥಿಗಳು ವಿರೋಧಿಸಿ ನ್ಯಾಯಾಲಯದ ಅಂತಿಮ ತೀರ್ಪಿನ ನಂತರ ನಾವು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ವಿದ್ಯಾರ್ಥಿಗಳು ಹಿಜಾಬ್ ಧರಿಸುವುದಾಗಿ ಹಠ ಹಿಡಿದ್ದು, ಪ್ರತಿಭಟನೆ ನಡೆಸಿ ಟಿಸಿ (ವರ್ಗಾವಣೆ ಪ್ರಮಾಣ ಪತ್ರ) ನೀಡುವಂತೆ ಅಥವಾ ತೀರ್ಪು ಹೊರಬೀಳುವವರೆಗೆ ಕಾಲೇಜಿಗೆ ರಜೆ ಘೋಷಿಸುವಂತೆ ಮನವಿ ಮಾಡಿದ್ದಾರೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಶಾಸಕ ಯು.ಟಿ.ಖಾದರ್ ಕೂಡ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಆಡಳಿತ ಸಮಿತಿಯೊಂದಿಗೆ ಸಭೆ ನಡೆಸಿದರು. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ನ್ಯಾಯಾಲಯದಿಂದ ತೀರ್ಪು ಬರುವವರೆಗೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.