LATEST NEWS
ಹಿಜಬ್ ಗೆ ಅವಕಾಶ ಕೊಟ್ಟರೆ ಶರಿಯತ್ ಕಾನೂನು ಕೇಳುತ್ತಾರೆ – ಹಿಂದೂ ಜಾಗರಣ ವೇದಿಕೆ
ಉಡುಪಿ ಜನವರಿ 21: ಉಡುಪಿ ಸರಕಾರಿ ಮಹಿಳಾ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಬ್ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ವಿವಾದ ಮತ್ತೆ ಹೆಚ್ಚಾಗುವ ಲಕ್ಷಣ ಕಾಣುತ್ತಿದೆ. ಇಂದು ಕಾಲೇಜಿಗೆ ಹಿಂದೂ ಜಾಗರಣಾ ವೇದಿಕೆ ಭೇಟಿ ನೀಡಿದೆ. ಶಾಲೆ ಕಾಲೇಜಿನಲ್ಲಿ ಸಮವಸ್ತ್ರ, ಸಮಾನತೆ ಇರಬೇಕು. ಬುರ್ಖಾ, ಟೋಪಿ ಕೇಳಿ ಮುಂದೆ ಶರಿಯತ್ ಕಾನೂನು ಕೇಳುತ್ತಾರೆ ಕೊಡುತ್ತೀರಾ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.
ಮತೀಯ ಸಂಘಟನೆಯೊಂದು ವಿದ್ಯಾರ್ಥಿಗಳಿಗೆ ವಿಷ ಬೀಜ ಬಿತ್ತಿದೆ. ದೇಶದ ಮಾನ ಹರಣಕ್ಕೆ ಅಂತರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ಉಡುಪಿಯ ಶೈಕ್ಷಣಿಕ ಖ್ಯಾತಿ ಕುಗ್ಗಿಸಲು ಷಡ್ಯಂತ್ರ ನಡೆಯುತ್ತಿದೆ. ಶೈಕ್ಷಣಿಕ ವಾತಾವರಣ ಕೆಡಿಸಲು ಹಿಂದು ಜಾಗರಣಾ ವೇದಿಕೆ ಬಿಡುವುದಿಲ್ಲ. ಕಾಲೇಜಲ್ಲಿ ಇಸ್ಲಾಂ ಕಾನೂನು ಜಾರಿಗೆ ತರುವ ಅವಕಾಶ ಕೊಡಬಾರದು. ಇವರಿಗೆ ಸರ್ಕಾರಿ ಶಿಕ್ಷಣ ಬೇಡದಿದ್ದರೆ ಮದರಾಸು ಶಿಕ್ಷಣ ಪಡೆಯಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಸೀದಿಯಲ್ಲೇ ನಿಮಗೆ ಬೇಕಾದ ಶಿಕ್ಷಣ ಪಡೆಯಿರಿ ಎಂದು ಸಲಹೆ ನೀಡಲಾಯಿತು.
ಹಿರಿಯ ಅಧಿಕಾರಿಗಳು ಪ್ರಾಂಶುಪಾಲರಿಗೆ ಒತ್ತಡ ಹಾಕುತ್ತಿರುವ ಬಗ್ಗೆ ಸಂಘಟನೆ ಗಮನಕ್ಕೆ ಬಂದಿದೆ. ಸರ್ಕಾರ, ಇಲಾಖೆ ಮೂಲಭೂತ ಮತೀಯ ಸಂಘಟನೆಗೆ ಬೆಂಬಲ ನೀಡಿದರೆ ನಾವು ಸಹಿಸಲ್ಲ. ಮುಸಲ್ಮಾನ ವಿದ್ಯಾರ್ಥಿಗಳು ಇಷ್ಟು ವರ್ಷ ಇಲ್ಲದ ವಿವಾದ ಶುರು ಮಾಡಿದ್ದಾರೆ. ನೂರು ಮುಸಲ್ಮಾನ ಹೆಣ್ಮಕ್ಕಳಲ್ಲಿ ಎಂಟು ಮಂದಿಯದ್ದು ಮಾತ್ರವಲ್ಲ ತಕರಾರು, ಶಿಕ್ಷಣಕ್ಕೆ ಧಾರ್ಮಿಕತೆ ಬೆರೆಸಿದರೆ ಇದು ಸರಿಯಲ್ಲ.
ಈ ನಡುವೆ ಪ್ರಾಂಶುಪಾಲರಿಗೆ ಹಿರಿಯ ಅಧಿಕಾರಿಗಳು ಒತ್ತಡ ಹಾಕುವ ಬಗ್ಗೆ ಮಾಹಿತಿಯಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿಗೆ ಕೇಸರಿ ಶಾಲು ಹಾಕುತ್ತೇವೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದ್ದಾರೆ. ಪುರುಷ ಶಿಕ್ಷಕರು ಪಾಠ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಹೇಳುವ ಸಾಧ್ಯತೆ ಇದೆ. ಸರ್ಕಾರ ಪದವಿಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.