LATEST NEWS
ಹಿಜಬ್ ವಿವಾದ – ನಾಳೆ ಸುಪ್ರೀಂ ತೀರ್ಪು ಪ್ರಕಟ ಸಾಧ್ಯತೆ
ನವದೆಹಲಿ ಅಕ್ಟೋಬರ್ 12 : ಕರ್ನಾಟಕದಿಂದ ಪ್ರಾರಂಭವಾಗಿ ಇದೀಗ ವಿಶ್ವದಾದ್ಯಂತ ಸುದ್ದಿ ಮಾಡುತ್ತಿರುವ ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಾಳೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯಸರಕಾರ ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೂರು ವಾರಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಇದೇ 16ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ಸುಪ್ರೀಂಕೋರ್ಟ್ ಹಿಜಬ್ ವಿವಾದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಲಿದೆ.
ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ರಾಜ್ಯ ಸರ್ಕಾರದ ನಿರ್ಧಾರ ಸರಿಯೋ? ತಪ್ಪೋ? ಎಂಬುದನ್ನು ಪ್ರಕಟಿಸಲಿದೆ. ಸೆಪ್ಟೆಂಬರ್ 22ರವರೆಗೂ ನಿರಂತರವಾಗಿ 10 ದಿನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿತ್ತು.