DAKSHINA KANNADA
ಸುರತ್ಕಲ್ ಟೋಲ್ ಗೇಟ್ ವಿಲೀನಕ್ಕೆ ಮುಂದಾದ ಹೆದ್ದಾರಿ ಪ್ರಾಧಿಕಾರ?
ಮಂಗಳೂರು, ಆಗಸ್ಟ್ 19: ಸುರತ್ಕಲ್ ನ ಎನ್‌ಐಟಿಕೆ ಬಳಿ ಇರುವ ಟೋಲ್ ಗೇಟ್ ಸಮೀಪದಲ್ಲಿರುವ ಹೆಜಮಾಡಿ ಮತ್ತು ತಲಪಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಮಾಡಲು ಕೇಂದ್ರದ ಹೆದ್ದಾರಿ ಇಲಾಖೆ ಪ್ರಾಧಿಕಾರ ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ.
ಪ್ರಾಧಿಕಾರದ ಚೇರ್ಮನ್ ಈ ಸಂಬಂಧ ಸುರತ್ಕಲ್ ಟೋಲ್ ಗೇಟ್ ತೆಗೆದು ಹಾಕಿ ಇತರ ಎರಡು ಟೋಲ್ ಗೇಟ್ ನೊಂದಿಗೆ ಶುಲ್ಕವನ್ನು ವಿಧಿಸಲು ಬೇಕಾದ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇವಲ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಿದರೆ ದುಪ್ಪಟ್ಟು ದರವನ್ನು ವಾಹನ ಸವಾರರು ನೀಡುವ ಸಂದರ್ಭ ಮತ್ತೆ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಎರಡು ಟೋಲ್ ಗೇಟ್ ಗಳಲ್ಲಿ ಶುಲ್ಕವನ್ನ ಹಂಚಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸಬೇಕು ಇಲ್ಲವೇ ವಿಲೀನಗೊಳಿಸಬೇಕು ಎಂಬ ಆಗ್ರಹದ ಹೋರಾಟ ಕಳೆದ ಮೂರು ನಾಲ್ಕು ವರ್ಷದಿಂದ ನಡೆಯುತ್ತಲೇ ಇದೆ. ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು 60 ಕಿಲೋ ಮೀಟರ್ ಅಂತರದಲ್ಲಿ ಹೆಚ್ಚುವರಿ ಟೋಲ್ ಗೇಟ್ ಗಳು ಇರುವುದು ಕಾನೂನು ಬದ್ದ ಅಲ್ಲ ಎಂದು ಕಳೆದ ಅಧಿವೇಶನದಲ್ಲಿ ಹೇಳಿಕೆ ನೀಡಿದ ಬಳಿಕ ಟೋಲ್ ರದ್ದಿಗೆ ಮಹತ್ವ ಬಂದಿತ್ತು.
ಒಂದು ವರ್ಷ ಟೋಲ್ ಗೇಟ್ ಗುತ್ತಿಗೆ ನೀಡಿದ್ದರೂ ಯಾವುದೇ ಸಮಸ್ಯೆ ಎದುರಾಗದು. ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ಇದನ್ನು ಗುತ್ತಿಗೆ ನೀಡಿ ನಡೆಸುತ್ತಿರುವುರಿಂದ ಕಾನೂನು ಬದ್ದ ಪ್ರಕ್ರಿಯೆಗೆ ತೊಡಕಾಗದು ಎಂದು ತಿಳಿದು ಬಂದಿದೆ.