KARNATAKA
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ಆದೇಶ
ಬೆಂಗಳೂರು ಜನವರಿ 21: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಕುರಿತಂತೆ ಯಾವುದೇ ಮಾನಹಾನಿ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ತಿಳಿಸಿದೆ. ಒಂದು ವೇಳೆ ಮಾನಹಾನಿಕಾರಕ ಹೇಳಿಕೆ ಎಂದು ಕಂಡು ಬಂದರೆ ಪೊಲೀಸರು ಕಾನೂನು ಕ್ರಮ ಜರುಗಿಸಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ.
ಮಹೇಶ್ ಶೆಟ್ಟಿ ತಿಮರೋಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ದ ಮಾನಹಾನಿಕಾರಕ ಹೇಳಿಕೆ ನೀಡದಂತೆ ಹಾಗೂ ಅವರ ವಿರುದ್ದ ಕಾನೂನು ಕ್ರಮ ಜರಗಿಸಲು ಸರಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಸೀನಪ್ಪ ಮತ್ತು ನಂದೀಶ್ ಕುಮಾರ್ ಜೈನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.
ಇನ್ನು ಮುಂದೆ ಸಾರ್ವಜನಿಕ ಸಭೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬ ಸದಸ್ಯರ ವಿರುದ್ಧ ಮಹೇಶ್ ಶೆಟ್ಟಿ ಅವರು ಯಾವುದೇ ಅಪಪ್ರಚಾರ ಅಥವಾ ಮಾನಹಾನಿ ಹೇಳಿಕೆಗಳನ್ನು ನೀಡಬಾರದು. ಒಂದೊಮ್ಮೆ ಮಾನಹಾನಿ ಹೇಳಿಕೆ ನೀಡಿರುವುದು ತಿಳಿದು ಬಂದರೆ ಪೊಲೀಸರು ಪರಿಶೀಲನೆ ನಡೆಸಿ ಕಾನೂನಿನ ಅಡಿಯಲ್ಲಿ ಕ್ರಮ ಜರಗಿಸಬಹುದು. ಇನ್ನು ಮಹೇಶ್ ಶೆಟ್ಟಿ ತಿಮರೋಡಿ ಅವರು ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರ ಬಗ್ಗೆ ತಮಗೇನಾದರೂ ದೂರು ಇದ್ದಲ್ಲಿ, ಆ ಬಗ್ಗೆ ಕಾನೂನಿನ ಅಡಿ ಪರಿಹಾರ ಕ್ರಮ ಕಂಡುಕೊಳ್ಳಬಹುದು ಎಂದು ಸೂಚಿಸಿದೆ.