LATEST NEWS
ಶಾಸಕ ಹರೀಶ್ ಪೂಂಜಾಗೆ ಕೋಮು ದ್ವೇಷ ಭಾಷಣ ಮಾಡದಂತೆ ಹೈಕೋರ್ಟ್ ತಾಕೀತು
ಮಂಗಳೂರು ಜುಲೈ 12: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗೆ ಹೈಕೋರ್ಟ್ ಯಾವುದೇ ರೀತಿಯ ದ್ವೇಷ ಭಾಷಣ ಮಾಡದಂತೆ ತಾಕೀತು ಮಾಡಿದೆ.
ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ, ಮುಸ್ಲೀಮ್ ಸಮುದಾಯವನ್ನು ತುಚ್ಚೀಕರಿಸುವ ಭಾಷಣ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಎಫ್ಐಆರ್ ಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ದೂರುದಾರು ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ನಲ್ಲಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂತು.

ಸರ್ಕಾರದ ವಕೀಲರು ಮತ್ತು ಅರ್ಜಿದಾರರ ವಕೀಲರ ಮನವಿಯ ಮೇರೆಗೆ ಹರೀಶ್ ಪೂಂಜಾ ಮೇಲೆ ದಾಖಲಾಗಿರುವ ಅಪರಾಧಗಳನ್ನು ಮುಂದುವರಿಸಬಾರದು ಎಂಬ ಷರತ್ತಿಗೆ ಒಳಪಟ್ಟು ಹರೀಶ್ ಪೂಂಜಾ ವಿರುದ್ಧದ ಮಧ್ಯಂತರ ಆದೇಶ ವಿಸ್ತರಿಸಲಾಗಿದೆ ಎಂದು ನ್ಯಾಯಾಲಯವು ಆದೇಶಿಸಿದೆ. ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೋರಲು ಮುಂದಾದರು. ಇದಕ್ಕೆ ಆಕ್ಷೇಪಿಸಿದ ದೂರುದಾರ ಎಸ್ ಬಿ ಇಬ್ರಾಹಿಂ ಪರ ವಕೀಲ ಎಸ್ ಬಾಲನ್ ಅವರು “ಮುಸ್ಲಿಮ್ ಸಮುದಾಯವನ್ನು ಪೈಶಾಚಿಕವಾಗಿ ಬಿಂಬಿಸುವ ಕೆಲಸವನ್ನು ಹರೀಶ್ ಪೂಂಜಾ ಮುಂದುವರಿಸಿದ್ದಾರೆ. ಮಧ್ಯಂತರ ಆದೇಶ ಇರುವುದನ್ನು ಬಳಸಿಕೊಂಡು ಹರೀಶ್ ಪೂಂಜಾ ಅವರು ಅಕ್ರಮ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ. ಅವರ ವಿರುದ್ಧ ಏಳು ಎಫ್‌ಐಆರ್ ದಾಖಲಾಗಿವೆ. ನ್ಯಾಯಾಲಯವು ಇದನ್ನು ಪರಿಗಣಿಸಬೇಕು” ಎಂದರು.
ಇದನ್ನು ಒಪ್ಪಿದ ನ್ಯಾಯಾಲಯವು “ಮುಂದಿನ ವಿಚಾರಣೆಯವರೆಗೆ ಪೂಂಜಾ ಅವರು ಯಾವುದೇ ತೆರನಾದ ಆರೋಪಿತ ಅಪರಾಧಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಆದೇಶದಲ್ಲಿ ದಾಖಲಿಸಲಾಗುವುದು” ಎಂದಿತು.