LATEST NEWS
ಮೆಕುನು ಚಂಡಮಾರುತ – ಸಮುದ್ರದಲ್ಲಿ ಏಳುತ್ತಿರುವ ಬೃಹತ್ ಗಾತ್ರದ ಅಲೆಗಳು
ಮೆಕುನು ಚಂಡಮಾರುತ – ಸಮುದ್ರದಲ್ಲಿ ಏಳುತ್ತಿರುವ ಬೃಹತ್ ಗಾತ್ರದ ಅಲೆಗಳು
ಉಡುಪಿ ಮೇ 26: ಯೆಮೆನ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ಮೆಕುನು ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿಗೂ ಹಬ್ಬಿದ್ದು ಕಡಲತಡಿಯ ನಿವಾಸಿಗಳು ಆತಂಕ ಎದುರಿಸುವಂತಾಗಿದೆ.
ನಿನ್ನೆ ಸಂಜೆಯಿಂದಲೇ ಅಬ್ಬರಿಸಲು ಆರಂಭಿಸಿದ ಕಡಲಿನ ಅಲೆಗಳ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಇನ್ನೊಂದೆಡೆ ರಾಜ್ಯದ ಕರಾವಳಿಗೂ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದ್ದು, ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳು ದಡ ಸೇರುವಂತಾಗಿದೆ.
ಉಡುಪಿಯ ಕಾಪು, ಮಲ್ಪೆ ಬೀಚ್ ಗಳಲ್ಲಿ ನಿನ್ನೆ ಸಂಜೆಯಿಂದಲೇ ಕಂಡುಬಂದ ಕಡಲ ಅಲೆಗಳ ಅಬ್ಬರದಿಂದಾಗಿ ಪ್ರವಾಸಿಗರು ಕಡಿಮೆ ಸಂಖ್ಯೆಗಳಲ್ಲಿ ಕಂಡುಬಂದರು. ಕಳೆದ ತಡರಾತ್ರಿ ಗಾಳಿ, ಗುಡುಗು-ಮಿಂಚು ಸಹಿತ ಮಳೆಯಾಗಿದ್ದು, ಇಂದು ಮುಂಜಾನೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ತುಂತುರು ಮಳೆಯೂ ಆಗಿದೆ.
ಸದ್ಯ ಕಡಲು ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಕರಾವಳಿಯ ಮಂದಿ ಆತಂಕಿತರಾಗಿದ್ದಾರೆ. ನಿನ್ನೆ ಸಂಜೆಯಿಂದಲೇ ಸುಮಾರು 500 ಮೀಟರ್ ದೂರದಿಂದಲೇ ಅಬ್ಬರಿಸಿಕೊಂಡು ದಡಕ್ಕೆ ಅಪ್ಪಳಿಸುತ್ತಿರುವ ಅಲೆಗಳು ಇನ್ನೂ ಇಳಿಕೆ ಕಾಣದಿರುವುದು ಅಪಾಯದ ಮುನ್ಸೂಚನೆಯನ್ನು ನೀಡುವಂತಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಓಖಿ ಚಂಡಮಾರುತ ಕರಾವಳಿಗೆ ಅಪ್ಪಳಿಸಿದ್ದ ಪರಿಣಾಮ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳು ನಷ್ಟವಾಗಿತ್ತು.