Connect with us

DAKSHINA KANNADA

ಹೈಕೋರ್ಟ್ ಆದೇಶ, ಸಮುದ್ರಕ್ಕೆ ತೆರಳಿ ಮುಳುಗಡೆಯಾದ ‘ಪ್ರಿನ್ಸಸ್ ಮಿರಾಲ್’ ಹಡಗು ಪರಿಶೀಲಿಸಿದ ದ.ಕ. ಜಿಲ್ಲಾಧಿಕಾರಿ..!

ಮಂಗಳೂರು:  ಉಳ್ಳಾಲ ಬೆಟ್ಟಂಪಾಡಿ ಸಮೀಪ ಅರಬ್ಬೀ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಪಾಯಕ್ಕೆ ಸಿಲುಕಿ ಮುಳುಗಡೆಯಾಗಿದ್ದ ವಿದೇಶಿ ಹಡಗು ಎಂ.ವಿ.ಪ್ರಿನ್ಸಸ್ ಮಿರಾಲ್ ಹಡಗಿನ ಅವಶೇಷಗಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರ ಮುಲ್ಲೈ ಮುಹಿಲನ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ತಜ್ಞರು ಒಳಗೊಂಡ ತಂಡ ಸಮುದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಅಧಿಕಾರಿಗಳು ಈ ಹಡಗಿನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿ, ವಿಪತ್ತು ನಿರ್ವಹಣಾ ಘಟಕ, ಮೀನುಗಾರಿಕಾ ಇಲಾಖೆ, ಪರಿಸರ ಮಾಲಿನ್ಯ ಅಧಿಕಾರಿಗಳು, ಮೀನುಗಾರರ ಮುಖಂಡರು ಒಳಗೊಂಡ ತಂಡ ಮುಳುಗಡೆಯಾದ ಹಡಗಿನ ಬಳಿಗೆ ದೋಣಿಯಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಯುಎಇ ಗೆ ಸೇರಿದ ಮೊಂಜಾಸ ಡಿಎಂಸಿಸಿ ಎಂಬ ಕಂಪೆನಿಯು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ತನಗೆ ಶಿಪ್ ಬಂಕರಿಂಗ್ ತೈಲ ಪೂರೈಕೆ ಮಾಡಿದಕ್ಕೆ 1.39ಕೋಟಿ ರೂಪಾಯಿ ಬಾಕಿ ಬರಬೇಕಾಗಿದ್ದು ಶಿಪಿಂಗ್ ಕಂಪೆನಿಯಿಂದ ಇದುವರೆಗೂ ಹಣ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಹಣ ಬರುವವರೆಗೂ ಪ್ರಿನ್ಸೆಸ್ ಮಿರಾಲ್ ಹಡಗನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಹಡಗಿನ ಬಿಡಿಭಾಗಗಳನ್ನು ಮಾರಾಟ ಮಾಡಿಸಿ ಅದರಿಂದ ಬರುವ ಮೊತ್ತದಿಂದ ತನ್ನ ನಷ್ಟವನ್ನು ಭರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡಿತ್ತು. ಅದರಂತೆ ವಿಚಾರಣೆ ನಡೆಸಿರುವ ಹೈಕೋರ್ಟ್ ನವೆಂಬರ್ ತಿಂಗಳಿನಲ್ಲಿ ಆದೇಶ ನೀಡಿ ಹಡಗನ್ನು ಮುಟ್ಟುಗೋಲು ಹಾಕುವಂತೆ ನವಮಂಗಳೂರು ಬಂದರೂ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಆದ್ರೆ ನೌಕೆ ಮುಳುಗಡೆಯಾದ ಪ್ರದೇಶ ತನ್ನ ವ್ಯಾಪ್ತಿಯಲ್ಲಿಲ್ಲ ಬದಲಾಗಿ ರಾಜ್ಯ ಸರಕಾರದ ಅಧೀನ ವ್ಯಾಪ್ತಿಯ ಹಳೇ ಬಂದರು ಪ್ರದೇಶಕ್ಕೆ ಸೇರಿದ್ದಾಗಿ ಮತ್ತು ಜಿಲ್ಲಾಡಳಿತ ಈ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟಿಗೆ ಎನ್‌ಎಂಪಿಎ ಮನವರಿಕೆ ಮಾಡಿತ್ತು. ಇದೀಗ ಹಡಗು ಮುಟ್ಟುಗೋಲು ಹಾಕಲು ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಇತರ ಅಧಿಕಾರಿಗಳು, ತಜ್ಞರು ಒಳಗೊಂಡ ಜಿಲ್ಲಾಧಿಕಾರಿ ನೇತೃತ್ವದ ತಂಡ ಸಮುದ್ರಕ್ಕೆ ತೆರಳಿ ಮುಳುಗಡೆಯಾಗಿದ್ದ ಎಂ ವಿ ಪ್ರಿನ್ಸೆಸ್ ಮಿರಾಲ್ ಹಡಗಿನ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಮಾಹಿತಿಗಳ ಪ್ರಕಾರ ಪ್ರಸ್ತುತ ಹಡಗಿನ ಸ್ಥಿತಿಗತಿಗಳ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.


ಮಂಗಳೂರು ಉಳ್ಳಾಲ ತೀರಕ್ಕೆ ಸನಿಹದಲ್ಲೇ ಈ ವಿದೇಶಿ ಹಡಗು 2022 ಜೂನ್ 20 ರಂದು ಪ್ರತಿಕೂಲ ಹವಾಮಾನ ವೈಪರಿತ್ಯದಿಂದಾಗಿ ಅವಘಡಕ್ಕೀಡಾಗಿ ಅರಬ್ಬೀ ಸಮುದ್ರದಲ್ಲಿ ಮುಳಗಡೆಯಾಗಿತ್ತು, 8,000 ಟನ್ ಉಕ್ಕಿನ ಕಾಯಿಲ್​ ತುಂಬಿಸಿಕೊಂಡು ಚೀನಾದ ಟಿಯಾಂಜಿನ್​ನಿಂದ ಲೆಬನಾನ್​ಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಈ ಸಂದರ್ಭ ಹಡಗಿನಲ್ಲಿದ್ದ 15 ಸಿರಿಯಾ ದೇಶದ ನಾವಿಕರನ್ನು ಕೋಸ್ಟ್ ಗಾರ್ಡ್ ಸಹಾಯದಿಂದ ರಕ್ಷಿಸಲಾಗಿತ್ತು. ಇದೀಗ ಹಡಗು ಮುಳುಗಡೆಯಾಗಿ ಸರಿ ಸುಮಾರು 18 ತಿಂಗಳು ಕಳೆದಿದೆ. ಹಡಗಿನ ಅವಶೇಷಗಳಿಂದ ಈ ಭಾಗದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಭಾರಿ ತೊಂದರೆ ಎದುರಾಗುತ್ತಿದ್ದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೀನಿನ ಬಲೆಗಳು ಹಡಗಿನ ಅವಶೇಷಗಳಿಗೆ ಸಿಲುಕಿ ವ್ಯಾಪಕ ನಷ್ಟ ಅನುಭವಿಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *