LATEST NEWS
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ – ಬ್ರೇಕ್ ಫೇಲ್ ಆಗಿ 20 ವಾಹನಕ್ಕೆ ಡಿಕ್ಕಿ ಹೊಡೆದ ಕಂಟೈನರ್ ಟ್ರಕ್

ಮುಂಬೈ ಜುಲೈ 26: ಕಂಟೈನರ್ ಟ್ರಕ್ ಒಂದು ಬ್ರೇಕ್ ಫೇಲ್ ಆದ ಕಾರಣ ಸುಮಾರು 20ಕ್ಕೂ ಅಧಿಕ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. 20 ಜನರಿಗೆ ಗಾಯಗಳಾಗಿವೆ.
ರಾಯಗಢ ಜಿಲ್ಲೆಯ ಖಲಾಪುರ್ ತಾಲೂಕಿನ ಖೋಪೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದೋಶಿ ಸುರಂಗದ ಬಳಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಜೋರಾಗಿ ಮಳೆ ಬರುತ್ತಿದ್ದುದರಿಂದ ಇಳಿಜಾರಿನಲ್ಲಿ ಇಳಿಯುವಾಗ ಕಂಟೇನರ್ ಟ್ರಕ್ ಬ್ರೇಕ್ ಫೇಲ್ ಆಗಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ವೇಗವಾಗಿ ಬಂದ ಕಂಟೇನರ್ ಟ್ರೇಲರ್ ಟ್ರಕ್ ಬ್ರೇಕ್ ವೈಫಲ್ಯದ ನಂತರ ನಿಯಂತ್ರಣ ಕಳೆದುಕೊಂಡು ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್‌ನಂತಹ ಐಷಾರಾಮಿ ಕಾರುಗಳು ಸೇರಿದಂತೆ 20ರಿಂದ 25 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎಲ್ಲರನ್ನೂ ನವಿ ಮುಂಬೈನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಾಳುಗಳಲ್ಲಿ ಒಬ್ಬ ಮಹಿಳೆ ನಂತರ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದರು. ಖೋಪೋಲಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಚಾಲಕ ಕುಡಿದಿರಲಿಲ್ಲ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.