ಮಲ್ಪೆ ಅಕ್ಟೋಬರ್ 04: ಮಲ್ಪೆ ಬಂದರಿನಲ್ಲಿ ಅಪರೂಪದ ಹೆಲಿಕಾಪ್ಟರ್ ಮೀನು ಕಾಣಿಸಿಕೊಂಡಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗೆ ಈ ಮೀನು ಬಿದ್ದಿದೆ. ಭಾರೀ ಗಾತ್ರ ಉದ್ದ ಬಾಲ.. ಅಕ್ಕಪಕ್ಕ ಬೆನ್ನ ಮೇಲೆ ಅಗಲಗಲ ರೆಕ್ಕೆಯಿರುವ ಮೀನು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿತು.

ಉಡುಪಿಯಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನಲ್ಲಿ ಬಲೆ ಬೀಸಲಾಗಿತ್ತು. ಬಂಗುಡೆ, ಅಂಜಲ್ ಮೀನಿನ ಜೊತೆಗೆ ಭಾರಿಗಾತ್ರದ ಈ ಮೀನು ಬಿದ್ದಿದೆ. ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದೆ. ಹೆಲಿಕಾಪ್ಟರ್ ಫಿಶ್ ಅಂತ ಅಡ್ಡ ಹೆಸರಿದೆ.

ಭಾರೀ ಗಾತ್ರದ ಮೀನು 84 ಕಿಲೋ ತೂಗುತ್ತಿತ್ತು. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್ ನ ಮಾಂಸ ಇಷ್ಟ ಇಲ್ಲ. ಇಲ್ಲಿನವರಿಗೆ ಅದರ ರುಚಿ ಹಿಡಿಸೋದಿಲ್ಲ. ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ನೆಮ್ಮೀನ್ ನ ಮಾಂಸವನ್ನು ಖರೀದಿ ಮಾಡುತ್ತಾರೆ. ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ನೆಮ್ಮಿನನ್ನು ರವಾನೆ ಮಾಡಲಾಯಿತು.