LATEST NEWS
ಹೆಜಮಾಡಿ ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡದ ಹಿನ್ನಲೆ ಗ್ರಾಮಪಂಚಾಯತ್ ಸದಸ್ಯರಿಂದ ಪರ್ಯಾಯ ರಸ್ತೆ ನಿರ್ಮಾಣ
ಮಂಗಳೂರು ಎಪ್ರಿಲ್ 1: ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡುವಂತೆ ಆಗ್ರಹಿಸಿ ಹೆಜಮಾಡಿ ಗ್ರಾಮಪಂಚಾಯತ್ ಸದಸ್ಯರು ಪರ್ಯಾಯ ರಸ್ತೆ ನಿರ್ಮಾಣ ಮಾಡಲು ಮುಂದಾದ ಘಟನೆ ನಡೆದಿದ್ದು, ಈ ಸಂದರ್ಭ ಟೋಲ್ ಅಧಿಕಾರಿಗಳು ಮತ್ತು ಗ್ರಾಮಪಂಚಾಯತ್ ಸದಸ್ಯರ ನಡುವೆ ಮಾತಿನಚಕಮಕಿ ನಡೆದಿದೆ.
ಹೆಜಮಾಡಿ ಗ್ರಾಮದ ಸ್ಥಳೀಯರಿಗೆ ಟೋಲ್‌ನಿಂದ ವಿನಾಯಿತಿ ನೀಡದ ಕಾರಣ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಸಹಿತ ಎಲ್ಲಾ ಸದಸ್ಯರು ಜೊತೆಗೂಡಿ ಟೋಲ್ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೆಜಮಾಡಿ ಗ್ರಾಮ ಪಂಚಾಯತ್‌ನ ಎಲ್ಲಾ 21 ಸದಸ್ಯರು ವಾರದ ಹಿಂದೆ ಟೋಲ್ ಅಧಿಕಾರಿ ಶಿವಪ್ರಸಾದ್ ರೈಯವರಿಗೆ ಮನವಿ ನೀಡಿ, ಹೆಜಮಾಡಿ ಗ್ರಾಮದ ವಾಹನಗಳಿಗೆ ಮತ್ತು ಮುಲ್ಕಿ ಶಾಲೆಗೆ ತೆರಳುವ ಬಸ್ಸ್ಗಳಿಗೆ ಟೋಲ್‌ನಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.
ಆದರೆ ವಾರದ ಬಳಿಕವೂ ಟೋಲ್ ಅಧಿಕಾರಿಗಳು ಸ್ಪಂದಿಸದ ಕಾರಣ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಪ್ರತ್ಯೇಕ ರಸ್ತೆ ನಿರ್ಮಿಸಿ, ವಾಹನಗಳನ್ನು ಬಿಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಟೋಲ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಪಡುಬಿದ್ರಿ ಠಾಣಾಧಿಕಾರಿ ದಿಲೀಪ್‌ರವರು ಸ್ಥಳಕ್ಕೆ ಆಗಮಿಸಿ ಸಂಧಾನಕ್ಕೆ ಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ನಂತರ ಟೋಲ್ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡುವ ತನಕ ಪ್ರತ್ಯೇಕ ರಸ್ತೆಯಲ್ಲಿ ವಾಹನ ಸಂಚಾರ ನಡೆಸಲಾಗುವುದೆಂದು ತೀರ್ಮಾನಿಸಿದರು.
ನಂತರ ಟೋಲ್ ಗೇಟ್ ಮ್ಯಾನೇಜರ್ 0 ಉನ್ನತ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಲಿಖಿತವಾಗಿ ಬರೆದು ಕೊಟ್ಟ ಬಳಿಕ ಟೊಲ್‌ಗೇಟಿನ ರಸ್ತೆಯಲ್ಲಿಯೇ ವಾಹನಗಳು ಸಂಚಾರ ನಡೆಸಿದವು.