BANTWAL
ಬಂಟ್ವಾಳ ಶತಮಾನದ ಪಾಣೆಮಂಗಳೂರು ಸೇತುವೆ ರಕ್ಷಣೆಗೆ ಘನ ವಾಹನಗಳಿಗೆ ನಿರ್ಬಂಧ..!
ಬಂಟ್ವಾಳ: ಶತಮಾನದ ಹಳೆಯದಾದ ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯ ಭಾಗದಲ್ಲಿ ಸಣ್ಣದಾದ ಬಿರುಕು ಕಂಡ ಹಿನ್ನೆಲೆಯಲ್ಲಿ ಘನಗಾತ್ರದ ವಾಹನಗಳು ಸಂಚಾರ ಮಾಡದಂತೆ ತಡೆಯಲು ಕಬ್ಬಿಣದ ಕಮಾನು ಹಾಕಲು ತಯಾರಿ ನಡೆಯುತ್ತಿದೆ.
ಪುರಸಭಾ ಇಲಾಖೆಯ ವತಿಯಿಂದ ಇದರ ಕಾಮಗಾರಿ ನಡೆಯುತ್ತಿದ್ದು, ಸೇತುವೆಯ ಎರಡು ಭಾಗದಲ್ಲಿ ನಾಲ್ಕು ಕಬ್ಬಿಣದ ಕಂಬಗಳನ್ನು ಹೂತು ಹಾಕಿದ್ದಾರೆ.ಮುಂದೆ ಮೇಲಿನ ಭಾಗದಲ್ಲಿ ಸೀಮಿತ ಎತ್ತರದಲ್ಲಿ ಅಂದರೆ ಘನಗಾತ್ರದ ಲಾರಿ, ಬಸ್ ಗಳು ಓಡಾಟ ನಡೆಸದಂತೆ ಅಡ್ಡವಾಗಿ ಮತ್ತೊಂದು ಕಬ್ಬಿಣದ ರಾಡ್ ಅಳವಡಿಸಲು ತಯಾರಿ ನಡೆಸಿದೆ. ಪ್ರಸ್ತುತ ಹಾಕಲಾಗಿರುವ ಕಬ್ಬಿಣದ ಕಂಬಗಳು ಗಟ್ಟಿಯಾದ ಬಳಿಕ ಮೇಲೆ ಅಡ್ಡಲಾಗಿ ರಾಡ್ ಅಳವಡಿಸಲಿದ್ದಾರೆ.
ವಾರದ ಬಳಿಕ ಕಾಮಗಾರಿ
ಸೇತುವೆ ಮಧ್ಯ ಭಾಗದಲ್ಲಿ ಸಣ್ಣ ಬಿರುಕು ಕಂಡಿದೆ ಹಾಗಾಗಿ ಸೇತುವೆಯಲ್ಲಿ ಘನಗಾತ್ರದ ವಾಹನಗಳು ಸಂಚಾರ ಮಾಡಿದರೆ ಮುರಿದು ಬೀಳುವ ಅವಕಾಶಗಳು ಇವೆ. ಎಂಬ ಎಚ್ಚರಿಕೆಯ ವಿಚಾರವನ್ನು ಸ್ಥಳೀಯ ಪೋಲೀಸ್ ಇಲಾಖೆ ಕಂದಾಯ ಇಲಾಖೆ ಮತ್ತು ಪುರಸಭಾ ಇಲಾಖೆ ಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ದೂರಿನಂತೆ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾ ರಿಗಳು ಘನಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ಹೇರುವ ಉದ್ದೇಶದಿಂದ ಕಮಾನುಗಳ ನಿರ್ಮಾಣಕ್ಕೆ ಮುಂದಾಗಿದೆ. ಬಿರುಕಿನ ಬಗ್ಗೆ ಸ್ಥಳೀಯರ ದೂರಿನಂತೆ ಮಾಧ್ಯಮ ಗಳು ವರದಿ ಮಾಡಿದ್ದು, ಘಟನೆ ನಡೆದ ಒಂದು ವಾರಗಳ ಬಳಿಕ ಇದೀಗ ಕಮಾನು ಹಾಕುವ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಅಕ್ರಮ ಮರಳು ವಾಹನಗಳು ಸಹಿತ ಅನೇಕ ಅಕ್ರಮ ವಸ್ತುಗಳ ಸಾಗಾಟ ಮಾಡುವುದಕ್ಕೆ ಇದೊಂದು ಕಳ್ಳದಾರಿಯಾಗಿತ್ತು. ಇದೀಗ ಕಮಾನು ಅಳವಡಿಸಿ ಘನಗಾತ್ರ ವಾಹನಗಳಿಗೆ ಸಂಚಾರಕ್ಕೆ ಅಡಚಣೆಯಾದ ಪರಿಣಾಮ ಅಕ್ರಮ ಮರಳು ಗಾರಿಕೆ ಮಾಡಿ ಸಾಗಾಟಕ್ಕೆ ಬ್ರೇಕ್ ಬೀಳಬಹುದು.