DAKSHINA KANNADA
ಇಂದು ಕೂಪನ್ ಬರುವ ವರ್ಷ ಆಧಾರ್..!!

ಮಂಗಳೂರು, ಆಗಸ್ಟ್ 21 : ಇದು ನೋಟು ಅಪಮಾನ್ಯ ಆದಾಗ ತಮ್ಮಲ್ಲಿರುವ ಹಳೆ ನೋಟುಗಳನ್ನು ಬದಲಾವಣೆ ಮಾಡಲು ಬ್ಯಾಂಕಿನ ಮುಂದೆ ನಿಂತ ಯಾವುದೇ ಸರತಿ ಸಾಲಲ್ಲ ಅಥವಾ ಇತ್ತೀಚೆಗೆ ಬಿಡುಗೆಡೆಯಾಗಿ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆದ ಬಾಹುಬಲಿ 2 ಸಿನೆಮಾದ ಟಿಕೆಟ್ ಪಡೆಯಲು ನಿಂತ ಸರತಿ ಸಾಲು ಅಲ್ಲಾ. ಇದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ಕಾರ್ಡಿಗೆ ನಿಂತ ಸಾಲು. ಅದೂ ಆಧಾರ್ ಕಾರ್ಡ್ ಪಡೆಯಲು ಅಲ್ಲಾ ಸ್ವಾಮೀ ಹೊಸ ಆಧಾರ್ ಪಡೆಯಲು ಅಥವಾ ಹಳೇ ಕಾರ್ಡ್ ತಿದ್ದುಪಡಿ ಮಾಡಲು ಕೂಪಾನ್ ಪಡೆಯಲು ನಿಂತ ಸರತಿ ಸಾಲು…ಇದರಲ್ಲಿ ಪುಟ್ಟ ಮಕ್ಕಳಿಂದ 80 ವರ್ಷ ವಯೋಮಿತಿಯ ಹಿರಿಯರೂ ಇದ್ದಾರೆ. ಪಾಪ ಇದಕ್ಕಾಗಿ ಮುಂಜಾನೆ 4 ಗಂಟೆಗೆ ಮನೆ ಬಿಟ್ಟು ಬಂದವರೂ ಇದರಲ್ಲಿ ಇದ್ದಾರೆ..!!
ಈ ಕೂಪಾನ್ ಪಡೆಯಲು ಅರ್ಜಿ ನಮೂನೆಯನ್ನು ಪಡೆದು ಅದನ್ನು ಭರ್ತಿ ಮಾಡಿ ಸರತಿಯಲ್ಲಿ ನಿಂತು ಸಲ್ಲಿಸಬೇಕು. ತುಂಬಿದ ಅರ್ಜಿ ಲೋಪಗಳಿದ್ದಾರೆ ಮತ್ತೆ ಅವರಿಗೆ ದೇವರೇ ಗತಿ. ಜಿಲ್ಲಾಧಿಕಾರಿ ಕಚೇರಿಯ ಎರಡು ಮಹಡಿಗಳು ಜನಜಂಗುಳಿಯಿಂದ ತುಂಬಿ ಆ ಸರತಿ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಪ್ರವೇಶ ಗೇಟಿನ ವರೆಗೂ ಹಬ್ಬಿತ್ತು. ಕೆಲವರು ಊಟ-ತಿಂಡಿ ಮಾಡದೇ ಬೆಳಗ್ಗಿನಿಂದಲೇ ಸರತಿಯಲ್ಲಿ ನಿಂತಿದ್ದರು. ಒಂದು ಕಡೆ ಜಡಿ ಮಳೆ ಅದರ ಬೆನ್ನಲೇ ಸುಡು ಬಿಸಿಲು. ಆ ಬಿಲಸಿಲು-ಮಳೆ ಮಧ್ಯೆ ಆಧಾರ ಕಾರ್ಡಿನ ಕೂಪಾನಿಗೆ ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ. ಕುಡಿಯಲು ನೀರಿಲ್ಲ .
ಸಾವಿರ ಸಂಖ್ಯೆಯಲ್ಲಿದ್ದ ಈ ಜನರಿಗೆ ಸರಿಯಾದ ಮಾಹಿತಿ ನೀಡುವ ಸಾಮಾನ್ಯ ವ್ಯವಸ್ಥೆ ಅಲ್ಲಿ ಮಾಡದಿರುವುದು ಅಧಿಕಾರಿಗಳ ಬೇಜಾವ್ದಾರಿ ಎದ್ದು ಕಾಣುತ್ತಿತ್ತು. ಓಟು ಪಡೆಯಲು ಎಲ್ಲಾ ತಂತ್ರಗಳನ್ನು ಬಳಸುವ ಹಾಗೂ ಪ್ರಚಾರ ಪಡೆಯಲು ಎಲ್ಲರಿಗಿಂತ ಮುಂದೆ ನಿಲ್ಲುವ ಜನಪ್ರತಿನಿಧಿಗಳು ಇತ್ತ ಸುಳಿಯದಿರುವುದು ದುರಂತ. ಅಲ್ಲಿನ ಅಧಿಕಾರಿಗಳ ಪ್ರಕರ ಒಂದು ದಿನಕ್ಕೆ 15 ರಿಂದ 20 ಜನರಿಗೆ ಮಾತ್ರ ಆಧಾರ್ ನೊಂದಣಿ ಮಾಡಲು ಸಾಧ್ಯ.
ಇಲ್ಲಿ ಬಂದವರಿಗೆ ಎಲ್ಲರಿಗೂ ತಾರಿಖನ್ನು ನಮೂದಿಸಿ ಕೂಪನ್ ನೀಡಲಾಗುತ್ತಿದೆ ಆ ಕೂಪನ್ ಪಡೆದ ವ್ಯಕ್ತಿ ಮತ್ತು ಅವರ ಕುಟುಂಬದವರು ಆ ದಿನದಂದೂ ಆಧಾರ್ ಕೇಂದ್ರಕ್ಕೆ ದಾಖಲೆ ಸಮೇತ ತೆರಳಿ ಪ್ರಕ್ರೀಯೆಗಳನ್ನು ಪೂರೈಸಬೇಕು ಎನ್ನುತ್ತಾರೆ. ಈ ಲೆಕ್ಕಚಾರ ನೋಡಿದರೆ ಇಂದು ಸರತಿ ಸಾಲಿನಲ್ಲಿ ನಿಂತು ಕೂಪಾನ್ ಪಡೆದರೆ ಬರುವ ವರ್ಷ 2018 ಎಪ್ರಿಲ್- ಮೇ ತಿಂಗಳಲ್ಲಿ ಆಧಾರ್ ಪಡೆಯಲು ಕೂಪನ್ ನೊಂದಿಗೆ ಆಧಾರ್ ಕೇಂದ್ರಕ್ಕೆ ಹೋಗಬೇಕಿದೆ. ಅಲ್ಲಿಯ ವರೆಗೂ ಈ ಕೂಪನನ್ನು ಜೋಪಾನವಾಗಿಡಬೇಕು..!! ಒಂದು ಕಡೆ ಪಾನ್ ಕಾರ್ಡ್, ಮೊಬೈಲ್ ಸಿಮ್ , ರೇಶನ್ ಕಾರ್ಡ್ ಹೀಗೇ ಎಲ್ಲದಕ್ಕೂ ಆಧಾರ್ ಕಡ್ಡಾಯವೆಂದು ಸಾರುತ್ತಲೇ ಇನ್ನೊಂದು ಕಡೆ ಅದಕ್ಕಾಗಿ ಜನರನ್ನು ಉರಿ ಬಿಸಿಲು – ಮಳೆಯಲ್ಲಿ ನೆನೆಸಿ ಕಾಯಿಸಿ ದುಡಿಮೆಗೂ ಕತ್ತರಿಹಾಕುವ ಕ್ರೌರ್ಯವೂ ನಡೆಯುತ್ತಿದೆ. ಇದರ ಬದಲು ಅತ್ಯಧುನಿಕ ತಂತ್ರಜ್ಙಾನ, ಅನಿಯಮಿತ ಇಂಟರ್ ನೆಟ್, ವೈ ಫೈ ಗಳು ಪುಕ್ಸಟೆ ಸಿಗುತ್ತಿರುವ ಈ ಕಾಲಘಟ್ಟದಲ್ಲಿ ಇನ್ನಷ್ಟು ಆಧಾರ್ ಕೇಂದ್ರಗಳನ್ನು ತೆರೆಯಬಾರದೇ ಎನ್ನುವುದು ಜನಸಾಮಾನ್ಯನ ಪ್ರಶ್ನೆಯಾಗಿದೆ.
