LATEST NEWS
ಸುಬ್ರಹ್ಮಣ್ಯದಲ್ಲಿ ಮಳೆ ಅವಾಂತರ – ಅಪಾರ ಪ್ರಮಾಣದ ಹಾನಿ
ಸುಬ್ರಹ್ಮಣ್ಯದಲ್ಲಿ ಮಳೆ ಅವಾಂತರ – ಅಪಾರ ಪ್ರಮಾಣದ ಹಾನಿ
ಪುತ್ತೂರು ಜೂನ್ 3: ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪರಿಸರದಲ್ಲಿ ನಿನ್ನೆ ಸಂಜೆ ಭಾರಿ ಗುಡುಗು ಸಹಿತ ಮಳೆ ಸುರಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ನಿನ್ನೆ ಮಧ್ಯಾಹ್ನ ದಿಂದ ಸುರಿದ ಭಾರಿ ಮಳೆಗೆ ಸುಬ್ರಹ್ಮಣ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ಮನೆಗಳ ಮೇಲೆ ಮರ ಬಿದ್ದಿದೆ. ಅಲ್ಲದೆ ಅಡಕೆ, ರಬ್ಬರ್ ಮರಗಳು ಹಾಗೂ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ.
ಯೇನೆಕಲ್ಲು ಗ್ರಾಮದ ಪರಿಸರದಲ್ಲಿ ಸುರಿದ ಭಾರಿ ಮಳೆಗೆ ಮಾಣಿಬೈಲು ನಿವಾಸಿ ಕೃಷ್ಣ ನಾಯ್ಕ ಎಂಬುವರ ಮನೆ ಬೃಹತ್ ಗಾತ್ರದ ಮರ ಬಿದ್ದು ಮನೆ ಪೂರ್ಣ ಹಾನಿಯಾಗಿದೆ, ಕೃಷ್ಣ ನಾಯ್ಕ ಅಲ್ಪಸ್ವಲ್ಪ ಗಾಯಗೊಂಡಿದ್ದರೆ, ಪತ್ನಿ ಜಯಂತಿ ಅವರ ಹಣೆಗೆ ಗಾಯವಾಗಿದೆ. ಅಲ್ಲದೆ ಯತೀಶ್ ಕಲ್ಲಾಜೆ ಅವರ ಮನೆ ಸಮೀಪದ ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.
ಸುಬ್ರಹ್ಮಣ್ಯ ದೇಗುಲದ ತೋಟದ ನೂರಾರು ಅಡಕೆ ಮರಗಳು ನೆಲಕ್ಕುರುಳಿದ್ದು, ಸುಬ್ರಹ್ಮಣ್ಯ ದೇಗುಲದ ತ್ಯಾಜ್ಯ ಘಟಕಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಐನಕಿದು ಗ್ರಾಮದ ಗುಂಡಡ್ಕ ನಿವಾಸಿ ಶಾಂತಿ ಎಂಬುವರ ಮನೆ ಮೇಲೆ ಮರ ಬಿದ್ದು ಗೋಡೆ, ಛಾವಣಿಗೆ ಹಾನಿ ಉಂಟಾಗಿದೆ. ಕಿರಿಭಾಗ ಬಳಿ ಬ್ರಹತ್ ಗಾತ್ರದ ಮರ ಬಿದ್ದು ಸೇತುವೆಗೆ ಭಾಗಶಃ ಹಾನಿ ಸಂಭವಿಸಿದೆ.
ಸುಬ್ರಹ್ಮಣ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಸಿದ ಗಾಳಿಗೆ ಮನೆ ಛಾವಣಿಯ ಶೀಟುಗಳು, ಹೆಂಚು ಇತ್ಯಾದಿ ಸೊತ್ತುಗಳು ಗಾಳಿಗೆ ಹಾರಿವೆ. ಈ ಭಾಗದ ಅನೇಕ ಮಂದಿ ಕೃಷಿಕರ ತೋಟಗಳಲ್ಲಿ ಅಡಕೆ ಮರಗಳು, ಬಾಳೆ, ರಬ್ಬರ್ ಗಿಡಗಳು ನೆಲಕಚ್ಚಿ ಅಪಾರ ಹಾನಿ ಸಂಭವಿಸಿದೆ. ಹಲವೆಡೆಗಳಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ತಂತಿಗಳು ತುಂಡಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.