BELTHANGADI
ಗುಡ್ಡ ಕುಸಿತ ಸಂಪೂರ್ಣ ಬಂದ್ ಆದ ಚಾರ್ಮಾಡಿ ಘಾಟ್
ಗುಡ್ಡ ಕುಸಿತ ಸಂಪೂರ್ಣ ಬಂದ್ ಆದ ಚಾರ್ಮಾಡಿ ಘಾಟ್
ಮಂಗಳೂರು ಜೂನ್ 12: ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಮಳೆ ಅವಾಂತರವನ್ನೆ ಸೃಷ್ಠಿಸಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗುತ್ತಿದೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಚಾರ್ಮಾಡಿ ಘಾಟಿಯಲ್ಲಿಯ ರಸ್ತೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಚಾರ್ಮಾಡಿ ಘಾಟ್ ನ ಎರಡನೇ ಹಾಗು ಮೂರನೇ ತಿರುವಿನಲ್ಲಿ ರಸ್ತೆಮೇಲೆ ಗುಡ್ಡ ಕುಸಿದ ಕಾರಣ ಕಳೆದ ರಾತ್ರಿಯಿಂದ ಘಾಟಿ ಉದ್ದಕ್ಕೂ ಸಾಲುಗಟ್ಟಿದ ವಾಹನಗಳು ನಿಂತಿವೆ.
ರಸ್ತೆ ಸಂಪೂರ್ಣ ಬಂದ್ ಆದ ಪರಿಣಾಮ ಅದರಲ್ಲಿ ನೂರಾರು ಪ್ರಯಾಣಿಕರು ಸಿಲುಕಿದ್ದು ಕಳೆದ ರಾತ್ರಿಯಿಂದ ಅನ್ನ ನೀರಿಲ್ಲದೇ ಉಪವಾಸ ಅನುಭವಿಸುತ್ತಿದ್ದಾರೆ. ಈ ನಡುವೆ ಕೆಲವು ಪ್ರಯಾಣಿಕರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗಿದ್ದು, ಬಿಪಿ, ಶುಗರ್ ನಿಂದ ಬಳಲಿದ ವೃದ್ಧೆಗೆ ಬೆಳ್ತಂಗಡಿ ನಿವಾಸಿ ಗಳಿಂದ ಔಷಧಿ ಪೂರೈಕೆ ಮಾಡಲಾಗಿದೆ. ಬೆಳ್ತಂಗಡಿ ಮೆಡಿಕಲ್ ಶಾಪ್ ನಿಂದ ಔಷಧಿ ಒಯ್ದ ಕೆಲ ಯುವಕರ ತಂಡ ಅನಾರೋಗ್ಯದಿಂದ ಬಳಲಿದವರಿಗೆ ಔಷಧ ಪೂರೈಸಿದ್ದಾರೆ. ಇನ್ನು ಕೆಲವರು ಪ್ರಯಾಣಿಕರಿಗೆ ಹಾಲು, ಬ್ರೆಡ್ ವಿತರಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ರಸ್ತೆ ಮೇಲೆ ಕುಸಿದಿರುವ ಗುಡ್ಡದ ಮಣ್ಣು ತೆರವು ಗೊಳಿಸಲು ಕಾರ್ಯಾಚರಣೆ ಆರಂಭವಾಗಿದ್ದು ಇನ್ನು ಕೆಲವೇ ಗಂಟೆಗಳಲ್ಲಿ ರಸ್ತೆ ಸಂಚಾರ ಸುಗಮ ಗೊಳ್ಳಲಿದೆ ಎಂದು ಹೇಳಲಾಗಿದೆ.