LATEST NEWS
ಭಾರೀ ಮಳೆ – ಮೇ 18 ರಂದು ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಮಂಗಳೂರು ಮೇ 16: ಮುಂಗಾರು ಪೂರ್ವ ಮಳೆಯ ಅಬ್ಬರ ಪ್ರಾರಂಭವಾಗಿದ್ದು, ಮೇ 18ರಂದು ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳಲ್ಲೂ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಈಗಾಗಲೇ ಮುಂಗಾರು ಮಳೆ ಅಂಡಮಾನ್ ನಿಕೋಬಾರ್ ದ್ವಿಪಕ್ಕೆ ಪ್ರವೇಶಿಸಿದ್ದು, ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದೆ. ಈ ಹಿನ್ನಲೆ ಹವಮಾನ ಇಲಾಖೆ ಕರಾವಳಿ ಜಿಲ್ಲೆಗಳಇಗೆ ಮೇ 17ಕ್ಕೆ ಆರೆಂಜ್ ಅಲರ್ಟ್ ನೀಡಿದ್ದು, ಮೇ 19 ರಿಂದ 21ರ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. 3 ದಿನಗಳಲ್ಲಿ ಭಾರೀ ಮಳೆಯಾಗುವ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ತುರ್ತು ಮುಂಜಾಗೃತಾ ಕ್ರಮವನ್ನು ಕೈಗೊಳ್ಳಲಾಗಿದೆ.

ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರ ವಹಿಸಬೇಕು. ಅಲರ್ಟ್ ಘೋಷಿಸಿದ ದಿನಗಳಲ್ಲಿ ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯಬಾರದು. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ತೀರಕ್ಕೆ ಹಾಗೂ ಸಮುದ್ರ ತೀರಕ್ಕೆ ತೆರಳದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.