LATEST NEWS
ಉಡುಪಿ ಜಿಲ್ಲೆಯಲ್ಲಿ ಮಳೆಗಿಂತ ಗಾಳಿ ಅಬ್ಬರ – ಅಪಾರ ಹಾನಿ

ಉಡುಪಿ ಜುಲೈ 27: ಉಡುಪಿ ಜಿಲ್ಲಾದ್ಯಂತ ನಿರಂತರ ಮಳೆ ಮುಂದುವರಿದಿದೆ. ಶನಿವಾರ ಮಳೆಗಿಂತಲೂ ಗಾಳಿಯ ಆರ್ಭಟವೇ ಜಾಸ್ತಿಯಾಗಿತ್ತು. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ, ಗಾಳಿಗೆ ಸುಮಾರು 18 ಮನೆಗಳಿಗೆ, 3 ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ವಿದ್ಯುತ್ ಕಂಬಗಳು ಉರುಳಿವೆ.
ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಂತೆ ಕಳೆದ 3 ದಿನ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು (ಭಾನುವಾರ) ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆ ಸ್ವಲ್ಪ ಇಳಿಮುಖವಾಗುವ ಸಾಧ್ಯತೆಯ ಸೂಚನೆ ನೀಡಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಗಾಳಿಗೆ ಮರಗಳು ಉರುಳಿ 8 ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ. ಬೈಂದೂರು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದೆ. ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಕಡಲೊರೆತ ತೀವ್ರಗೊಂಡಿದೆ.

ಕುಂದಾಪುರ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಬಿರುಸಿನ ಮಳೆಯ ಪರಿಣಾಮವಾಗಿ ಕೆಲವೆಡೆ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಯಿತು.
ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಕಾರ್ಕಳದಲ್ಲಿ 5 ಸೆಂ.ಮೀ., ಕುಂದಾಪುರದಲ್ಲಿ 6 ಸೆಂ.ಮೀ., ಬೈಂದೂರಿನಲ್ಲಿ 5 ಸೆಂ.ಮೀ., ಬ್ರಹ್ಮಾವರದಲ್ಲಿ 6 ಸೆಂ.ಮೀ., ಹೆಬ್ರಿಯಲ್ಲಿ 9 ಸೆಂ.ಮೀ. ಮಳೆಯಾಗಿದೆ.
ಕುಂದಾಪುರದ ಗುಲ್ವಾಡಿ, ಬೇಲೂರಿನಲ್ಲಿ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕುಂದಾಪುರ ತಾಲ್ಲೂಕಿನ ಆನಗಳ್ಳಿ, ವಡೇರಹೋಬಳಿ, ತಲ್ಲೂರು, ಗುಲ್ವಾಡಿ, ಬನ್ನೂರು, ಕೋಣಿ, ಶಂಕರನಾರಾಯಣ, ರಟ್ಟಾಡಿ, ಗುಜ್ಜಾಡಿ, ಯಾಡ್ಯಾಡಿ ಮತ್ಯಾಡಿಯಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಶುಕ್ರವಾರ ಮಧ್ಯಾಹ್ನದ ವರೆಗೆ ಸುರಿದ ಭಾರಿ ಮಳೆಗೆ ಉಡುಪಿ ನಗರದ ಅಂಬಲಪಾಡಿ ಬೈಪಾಸ್, ಕರಾವಳಿ ಬೈಪಾಸ್‌ನಲ್ಲಿ ಸರ್ವಿಸ್ ರಸ್ತೆಗಳ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಸಂಕಷ್ಟ ಅನುಭವಿಸಿದರು.