LATEST NEWS
ಉಡುಪಿ – ಹಠಾತ್ ಮಳೆಗೆ ಹೈರಾಣಾದ ಜನರು…!!
ಉಡುಪಿ ಅಕ್ಟೋಬರ್ 22: ಉಡುಪಿ ನಗರದಲ್ಲಿ ಇಂದು ರಾತ್ರಿ ಸುರಿದ ಅಕಾಲಿಕ ಮಳೆ ಅವಾಂತರವನ್ನೆ ಸೃಷ್ಠಿಸಿದೆ. ಗುಡುಗು ಸಿಡಿಲು ಸಹಿತ ಒಂದು ಗಂಟೆಗಳ ಕಾಲ ಮಳೆ ಸುರಿದಿದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದ ಹಿನ್ನಲೆ ಕರಾವಳಿ ಪ್ರದೇಶಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು, ಅದೆ ರೀತಿ ಇಂದು ಸಂಜೆ ಸಂದರ್ಭ ಹಠಾತ್ತಾಗಿ ಮಳೆಯಾಗಿದ್ದು, ಒಂದು ತಾಸು ಸುರಿದ ಬಿರುಸಿನ ಮಳೆಗೆ ರಸ್ತೆಗಳು ಜಲಾವೃತಗೊಂಡವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಏಕಾಏಕಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಳ ಪರ್ಕಳದಲ್ಲಿರುವ ನಗರಸಭೆಯ ನೀರಿನ ರೇಚಕದ ಬಳಿ ಮಳೆಯ ನೀರಿನ ಜತೆಗೆ ಚರಂಡಿಯ ನೀರು ಸೇರಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಯಿತು.
ಇಂದ್ರಾಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ಉಡುಪಿಯಿಂದ ಮಣಿಪಾಲಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮುಖ್ಯ ರಸ್ತೆಯ ಸಂಚಾರ ನಿರ್ಬಂಧಿಸಲಾಗಿತ್ತು. ಪರಿಣಾಮ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿ ಕಿ.ಮೀ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಉಡುಪಿಯಿಂದ ಮಣಿಪಾಲಕ್ಕೆ ತೆರಳಲು ಬರೋಬ್ಬರಿ 1 ತಾಸಿಗೂ ಹೆಚ್ಚು ಕಾಲ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿದ್ದರು. ಏಕಾಏಕಿ ಮಳೆಯೂ ಸುರಿದ ಪರಿಣಾಮ ಸವಾರರು ಹೈರಾಣಾಗಬೇಕಾಯಿತು. ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿದ್ದವು.