DAKSHINA KANNADA
ಮಳೆ ಅಬ್ಬರ – ಶಾಲೆಗೆ ತಲುಪಿರುವ ಮಕ್ಕಳ ಬಗ್ಗೆ ಕಟ್ಟೆಚ್ಚರದಿಂದ ಇರಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು ಜೂನ್ 30: ಕರಾವಳಿಯಾದ್ಯಂತ ಸುರಿಯುತ್ತಿರುವ ಮಳೆ ಅಬ್ಬರ ಮುಂದುವರೆದಿದ್ದು, ಈ ಹಿನ್ನಲೆ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಇಂದು(ಜೂನ್ 30) ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೆ ಮಕ್ಕಳು ಶಾಲೆಗಳಿಗೆ ಬಂದಿದ್ದರೆ ಎಲ್ಲಾ ಮುಂಜಾಗೃತೆ ವಹಿಸಿ ಕಾರ್ಯ ನಿರ್ವಹಿಸಲು ಶಾಲೆಗಳಿಗೆ ಸೂಚಿಸಲಾಗಿದೆ. ಮಕ್ಕಳು ಶಾಲೆಗೆ ಬರಲು ಅನಾನುಕೂಲವಾದ ಪ್ರದೇಶದಲ್ಲಿ ಅಂತಹ ಮಕ್ಕಳಿಗೆ ಈ ದಿನ ರಜೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ದ್ವಿಚಕ್ರವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಈಗಾಗಲೇ ಶಾಲೆಗೆ ಬಂದಿರುವ ಮಕ್ಕಳ ಸುರಕ್ಷತೆ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಯಾ ತಾಲ್ಲೂಕುಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ರಜೆ ನಿರ್ಧಾರ ಕೈಗೊಳ್ಳಲು ತಹಶೀಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ನಡುವೆ ಹವಾಮಾನ ಇಲಾಖೆ ಗುರುವಾರ ಯಲ್ಲೋ ಅಲರ್ಟ್ ಘೋಷಿಸಿದೆ. ಶುಕ್ರವಾರವೂ ಇದೇ ರೀತಿ ಮಳೆಯಾದರೆ, ಪರಿಸ್ಥಿತಿ ಅವಲೋಕಿಸಿ ಶಾಲೆಗಳಿಗೆ ರಜೆ ನೀಡುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮಳೆಯ ಅಬ್ಬರಕ್ಕೆ ಮಂಗಳೂರಿನ ಹಲವೆಡೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ.