DAKSHINA KANNADA
ಭಾರೀ ಮಳೆಗೆ ಉಕ್ಕಿ ಹರಿದ ನದಿಗಳು, ಕಾಜೂರು, ದಿಡುಪೆ ಭಾಗದಲ್ಲಿ ಹೆಚ್ಚಿದ ಆತಂಕ
ಭಾರೀ ಮಳೆಗೆ ಉಕ್ಕಿ ಹರಿದ ನದಿಗಳು, ಕಾಜೂರು, ದಿಡುಪೆ ಭಾಗದಲ್ಲಿ ಹೆಚ್ಚಿದ ಆತಂಕ
ಮಂಗಳೂರು ಜೂನ್ 1: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನಲೆ ಕರಾವಳಿಯಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಇಂದೂ ಕೂಡ ಮುಂದುವರೆದಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮಳೆಯಾಗುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ. ಘಟ್ಟದ ಭಾಗದಲ್ಲಿ ಮಳೆಯಾದ ಕಾರಣ ಕಳೆದ ಬಾರಿಯ ದುರಂತವನ್ನು ನೆನಪಿಸುವಂತೆ ಅಲ್ಲಿನ ಹೊಳೆಗಳು ಉಕ್ಕಿ ಹರಿದಿವೆ. ಬೆಳ್ತಂಗಡಿ ತಾಲೂಕಿನ ದಿಡುಪೆ, ಕಾಜೂರು, ಕುಕ್ಕಾವು ಭಾಗದಲ್ಲಿ ಹರಿಯುವ ಮೃತ್ಯುಂಜಯ ನದಿ ಉಕ್ಕೇರಿದ್ದು ಸೇತುವೆಯ ಮೇಲಿಂದ ನೀರು ಹರಿದಿದೆ.
ಇಂದು ಬೆಳಗ್ಗಿನ ಜಾವ ಒಂದೇ ಸಮನೆ ನೀರು ಉಕ್ಕಿದ್ದನ್ನು ಕಂಡು ಜನ ಕಂಗಾಲಾಗಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಈ ಭಾಗದಲ್ಲಿ ಘಟ್ಟ ಪ್ರದೇಶಗಳು ಒಡೆದು ನೀರು ಉಕ್ಕಿ ಬಂದಿತ್ತು. ಅಪಾರ ಪ್ರಮಾಣದ ಕೃಷಿ ಭೂಮಿ ಮತ್ತು ನೂರಾರು ಮನೆಗಳು ಪ್ರವಾಹಕ್ಕೆ ಆಹುತಿಯಾಗಿತ್ತು. ಈ ಬಾರಿಯೂ ಅಂಥದ್ದೇ ದುರಂತ ಮರುಕಳಿಸುತ್ತಾ ಅನ್ನುವ ಅನುಮಾನ ಆರಂಭದಲ್ಲೇ ವ್ಯಕ್ತವಾಗಿದೆ.