LATEST NEWS
ಕರಾವಳಿಯಲ್ಲಿ ಮಳೆ ಅಬ್ಬರ – ಬಿಡುವಿಲ್ಲದೆ ಸುರಿಯುತ್ತಿದೆ ಮಳೆ
ಮಂಗಳೂರು ಜೂನ್ 26: ಕರಾವಳಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮುಂಗಾರು ಮಳೆ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿ ಈ ರೀತಿಯಾಗಿ ಮಳೆಯಾಗುತ್ತಿದೆ. ಈಗಾಗಲೇ ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮಳೆ ಹೆಚ್ಚಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆವರೆಗೆ ಭಾರಿ ಮಳೆಯಾಗಿದೆ. ಮಂಗಳವಾರ ರಾತ್ರಿ 9 ಗಂಟೆ ಶುರುವಾಗಿದ್ದ ಮಳೆ ಬುಧವಾರ ಬೆಳಿಗ್ಗೆವರೆಗೂ ಒಂದೇ ಸಮನೆ ಸುರಿದಿತ್ತು. ಸುಮಾರು ಅರ್ಧ ಗಂಟೆ ಬಿಡುವು ಪಡೆದ ಮಳೆ ಮತ್ತೆ ಮುಂದುವರಿದಿದೆ. ಬುಧವಾರ ಬೆಳಿಗ್ಗೆ 8.30 ರವರೆಗಿನ 24 ಗಂಟೆಗಳಲ್ಲಿ ಬಂಟ್ವಾಳ ತಾಲ್ಲೂಕಿನ ಮಂಚಿಯಲ್ಲಿ 18.8 ಸೆಂ.ಮೀ, ಇರಾದಲ್ಲಿ 15.4, ಬಾಳ್ತಿಲದಲ್ಲಿ 14.35, ಬಾಳೆಪುಣಿಯಲ್ಲಿ 14.15, ಗೋಳ್ತಮಜಲುವಿನಲ್ಲಿ 12.30, ವಿಟ್ಲಮಡ್ನೂರುವಿನಲ್ಲಿ11.75, ಮಂಗಳೂರು ತಾಲ್ಲೂಕಿನ ಮಳವೂರಿನಲ್ಲಿ 12.95 ಉಳ್ಳಾಲ ತಾಲ್ಲೂಕಿನ ಕೋಟೆಕಾರಿನಲ್ಲಿ 12.35, ಬೋಳಿಯಾರ್ ನಲ್ಲಿ 12.25 ಹಾಗೂ ಕಿನ್ಯದಲ್ಲಿ, 11.15 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಮಳೆ ಅಬ್ಬರ ಮುಂದುವರೆದಿದ್ದು, ಈಗಾಗಲೇ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.