BELTHANGADI
ಬೆಳ್ತಂಗಡಿ – ಮಳೆ ಅಬ್ಬರಕ್ಕೆ ರಸ್ತೆ ಮೇಲೆ ಬಿದ್ದ 33 ಕೆವಿ ವಿದ್ಯುತ್ ಟವರ್ -ವಾಹನಗಳಿಗೆ ಹಾನಿ
ಬೆಳ್ತಂಗಡಿ ನವೆಂಬರ್ 06: ಕರಾವಳಿಯಲ್ಲಿ ಹಿಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ನಡುವೆ ನಿನ್ನೆ ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಭಾನುವಾರ ಮದ್ಯಾಹ್ನದ ಬಳಿಕ ಗುಡುಗು ಸಹಿತ ಸುಮಾರು ಒಂದೂವರೆ ಗಂಟೆ ಕಾಲ ಭಾರಿ ಮಳೆಯಾಗಿದ್ದು ಕೆಲವೆಡೆ ಹಾನಿಯಾಗಿದೆ.
ಬೆಳ್ತಂಗಡಿ ತಾಲೂಕಿn ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಗುರುವಾಯನಕೆರೆ- ಧರ್ಮಸ್ಥಳ ವಿದ್ಯುತ್ ಸಂಪರ್ಕದ ಮುಖ್ಯ ಲೈನ್(33KV) ನ ಟವರ್ ಭಾನುವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ.
ಪರಿಣಾಮ ಒಂದು ಕಾರು ಹಾಗೂ ದ್ವಿಚಕ್ರ ವಾಹನ ಜಖಂಗೋಂಡಿದೆ. ಘಟನೆಗೆ ಭಾರಿ ಮಳೆ ಕಾರಣ ಎಂದು ಅಂದಾಜಿಸಲಾಗಿ ದ್ದು ವಿದ್ಯುತ್ ಟವರ್ ನೆಲದತ್ತ ಬಾಗುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲಿ ವಾಹನ ನಿಲ್ಲಿಸಿ, ಪರಿಶೀಲನೆಗೆ ತೆರಳುತ್ತಿದ್ದಂತೆ ವಿದ್ಯುತ್ ಟವರ್ ವಾಹನಗಳ ಮೇಲೆಯೇ ಕುಸಿದು ಬಿದ್ದಿದೆ. ಸ್ಥಳದಲ್ಲಿದ್ದವರು ಸಣ್ಣ,ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಕಾರು, ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ಮೆಸ್ಕಾಂನ ತುರ್ತು ಸ್ಪಂದನೆ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ. ಟವರ್ ಕುಸಿತದ ಕಾರಣ ಧರ್ಮಸ್ಥಳ ಭಾಗದ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.