LATEST NEWS
ಕರಾವಳಿಯಲ್ಲಿ ಮುಂದುವರೆದ ಮಳೆ – ಜುಲೈ 18 ರಂದು ರೆಡ್ ಅಲರ್ಟ್ ಹವಾಮಾನ ಇಲಾಖೆ
ಬೆಳ್ತಂಗಡಿ ಜುಲೈ 17: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಮುಂದುವರೆದಿದೆ. ಕರಾವಳಿಯಲ್ಲಿ ಕಳೆದ ಎರಡುದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲದೆ ಹವಾಮಾನ ಇಲಾಖೆ ಜು.17 ಮತ್ತು 18 ರಂದು ರೆಡ್ ಅಲರ್ಟ್ ಘೋಷಿಸಿದೆ.
ದ.ಕ.ಜಿಲ್ಲೆಯಲ್ಲಿ ಮಂಗಳವಾರ ದಿನಪೂರ್ತಿ ಎಡೆಬಿಡದೆ ಮಳೆ ಸುರಿದಿದೆ. ನಸುಕಿನಿಂದಲೇ ಮಳೆ ಸುರಿದಿದ್ದು, ಹಗಲು ಹೊತ್ತು ಬಿಟ್ಟು ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಜೀವನದಿ ನೇತ್ತಾವತಿ ಹಾಗೂ ಕುಮಾರಧಾರ ನದಿಯಲ್ಲಿ ನೀರು ಏರಿಕೆಯಾಗಿದೆ. ಇದರಿಂದಾಗಿ ನೇತ್ರಾವತಿ ನದಿ ತೀರದಲ್ಲಿ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಇನ್ನು ಬೆಳ್ತಂಗಡಿಯ ಗುರುವಾಯನಕೆರೆ ಸಮೀಪದ ರಸ್ತೆಯಲ್ಲೇ ನೀರು ಹರಿದಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲೇ ನೀರು ನಿಂತಿದ್ದು, ರಸ್ತೆ ಬದಿಯಲ್ಲಿದ್ದ ಅಂಗಡಿಗಳು ನೀರಿನಲ್ಲಿ ಮುಳುಗಡೆಯಾಗಿದೆ. ಕರಾವಳಿಯಲ್ಲಿ ಮಳೆ ಜೊತೆ ಕಡಲ ಅಬ್ಬರ ಮುಂದುವರೆದಿದೆ. ಸಮುದ್ರ ತೀರದಲ್ಲಿ ಭಾರೀ ಗಾಳಿ ಜೊತೆ ಅಲೆಗಳ ಅಬ್ಬರ ಜೊರಾಗಿದೆ. ಇನ್ನು ಮಳೆ ಮತ್ತೆ ಜೋರಾಗುವ ಸಂಭವವಿದ್ದು, ಇಂದು ಮತ್ತು ನಾಳೆ ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.