LATEST NEWS
ಭಾರಿ ಮಳೆಗೆ ಕಡಲು ಪ್ರಕ್ಷುಬ್ದ ಮುಳುಗಿದ ಮೀನುಗಾರಿಕಾ ಬೋಟು ಅಪಾರ ನಷ್ಟ
ಭಾರಿ ಮಳೆಗೆ ಕಡಲು ಪ್ರಕ್ಷುಬ್ದ ಮುಳುಗಿದ ಮೀನುಗಾರಿಕಾ ಬೋಟು ಅಪಾರ ನಷ್ಟ
ಉಡುಪಿ ಅಗಸ್ಟ್ 14: ಕರಾವಳಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟುಗಳು ಮುಳುಗಡೆಯಾಗಿವೆ. ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಒಂದು ಮೀನುಗಾರಿಕೆ ಬೋಟು ಕೋಡಿಬೆಂಗ್ರೆ ಸಮೀಪ ಮುಳುಗಡೆಯಾಗಿದ್ದು, ಎರಡು ಬೋಟುಗಳು ಸುರತ್ಕಲ್ ಹಾಗೂ ಭಟ್ಕಳ ಸಮೀಪ ತಾಂತ್ರಿಕ ತೊಂದರೆಯಿಂದ ಸಮುದ್ರ ಮಧ್ಯೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಮಲ್ಪೆ ತೊಟ್ಟಂನ ಶಕುಂತಲ ಕರ್ಕೇರ ಎಂಬವರ ‘ಹನುಮ ಸಾನಿಧ್ಯ’ ಬೋಟು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ್ಟಿದ್ದು, ಕೋಡಿಬೆಂಗ್ರೆಯ 12 ಮಾರು ದೂರದ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಬೋಟಿನ ಇಂಜಿನ್ ಕೆಟ್ಟು ಹೋಗಿದ್ದು , ಈ ನಡುವೆ ಸಮುದ್ರದಲ್ಲಿ ಭಾರೀ ಗಾಳಿಮಳೆಯ ಪರಿಣಾಮ ಕೆಟ್ಟು ನಿಂತ ಬೋಟು ಏಳು ಮಾರು ದೂರದವರೆಗೆ ದಡಕ್ಕೆ ಬಂದು ಕಲ್ಲಿಗೆ ಬಡಿದಿದ್ದರ ಪರಿಣಾಮ ಬೋಟಿನೊಳಗೆ ನೀರು ನುಗ್ಗಿ ಕೆಲ ಹೊತ್ತಿನ ಬಳಿಕ ಬೋಟು ಮುಳುಗಡೆಯಾಗಿದೆ. ಬೋಟಿನಲ್ಲಿದ್ದ ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ಬೋಟಿನವರು ರಕ್ಷಿಸಿದ್ದಾರೆ. ಈ ಅವಘಡದಿಂದಾಗಿ ಸುಮಾರು 9 ಲಕ್ಷ ರೂ. ನಷ್ಟವಾಗಿದೆ.
ಎರಡು ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ‘ವಿಶ್ವಾಸ್’ ಎಂಬ ಬೋಟು ಸುರತ್ಕಲ್ ಸಮೀಪದ 35 ನಾಟೆಕಲ್ ಹಾಗೂ ‘ಲಕ್ಷ್ಮೀ ಜನಾರ್ದನ್’ ಎಂಬ ಬೋಟು ಭಟ್ಕಳ ಸಮೀಪದ 40 ನಾಟೆಕಲ್ ದೂರದ ಸಮುದ್ರದಲ್ಲಿ ಇಂಜಿನ್ ಸಮಸ್ಯೆ ಯಿಂದ ಕೆಟ್ಟು ನಿಂತಿದ್ದು, ವಿಶ್ವಾಸ್ ಬೋಟಿನಲ್ಲಿ ಒಟ್ಟು 9 ಮಂದಿ ಮತ್ತು ಲಕ್ಷ್ಮೀ ಜನಾರ್ದನ್ ಬೋಟಿನಲ್ಲಿ ಎಂಟು ಮಂದಿ ಮೀನುಗಾರರಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೋಟಿನವರು ಹಾಗೂ ಮಲ್ಪೆ ಮೀನುಗಾರರ ಸಂಘದವರು ಈಗಾಗಲೇ ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದು, ಭಾರೀ ಮಳೆಯಿಂದ ಕಡಲ ಅಬ್ಬರ ತೀವ್ರಗೊಂಡಿರುವುದರಿಂದ ಈ ಬೋಟುಗಳ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.
ಈ ಬೋಟಿನಲ್ಲಿರುವ ಮೀನುಗಾರರು ಇದೀಗ ಸಂರ್ಪಕದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಮ್ಮ ಕಾರ್ಯಾಚರಣೆಯ ವ್ಯಾಪ್ತಿ ಐದು ನಾಟೆಕಲ್ ದೂರವಾಗಿರುವುದರಿಂದ ಈ ಕುರಿತು ಈಗಾಗಲೇ ಮಂಗಳೂರು ಹಾಗೂ ಕಾರವಾರ ಕೋಸ್ಟ್ ಗಾರ್ಡ್ಗಳಿಗೆ ಮಾಹಿತಿ ರವಾನಿಸ ಲಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಜೈಶಂಕರ್ ತಿಳಿಸಿದ್ದಾರೆ.
ಸಮುದ್ರ ಸಾಕಷ್ಟು ಪ್ರಕ್ಷುಬ್ದಗೊಂಡಿರುವುದರಿಂದ ಯಾರಿಗೂ ಸಮುದ್ರಕ್ಕೆ ತೆರಳಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ ಯಾರು ಕೂಡ ಮೀನುಗಾರಿಕೆಗೆ ತೆರಳದಂತೆ ಸೂಚನೆ ಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.