LATEST NEWS
ಮೆಕುನು ಚಂಡಮಾರುತದ ಪರಿಣಾಮ ಅಲ್ಲ ಇದು ಮುಂಗಾರು ಮಳೆ – ಜಿಲ್ಲಾಧಿಕಾರಿ
ಮೆಕುನು ಚಂಡಮಾರುತದ ಪರಿಣಾಮ ಅಲ್ಲ ಇದು ಮುಂಗಾರು ಮಳೆ – ಜಿಲ್ಲಾಧಿಕಾರಿ
ಮಂಗಳೂರು ಮೇ 29: ಇಂದು ಸುರಿದ ಮೇಘ ಸ್ಪೋಟಕ್ಕೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದೆ. ಈ ನಡುವೆ ಮಾಧ್ಯಮಗಳಲ್ಲಿ ಮೆಕುನು ಚಂಡಮಾರುತದ ಪರಿಣಾಮವಾಗಿ ಭಾರಿ ಮಳೆಯಾಗುತ್ತಿದೆ ಎಂದು ಸುದ್ದಿಯಾಗುತ್ತಿದ್ದು, ಇದಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ದಕ್ಷಿಣ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಮುಂಗಾರು ಮಳೆಯಾಗಿದ್ದು, ಮೆಕುನು ಚಂಡಮಾರುತ ಪರಿಣಾಮದಿಂದ ಉಂಟಾದ ಮಳೆಯಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಮಳೆಯಿಂದ ಯಾವುದೇ ಹಾನಿ ಅಥವಾ ಸಮಸ್ಯೆ ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಕಂಟ್ರೋಲ್ ರೂಂ ಸಂಖ್ಯೆ 1077 ಇದಕ್ಕೆ ಕರೆ ಮಾಡಿ ತಮ್ಮ ಸಮಸ್ಯೆ ತಿಳಿಸಿದರೆ ಕೂಡಲೇ ಸ್ಪಂದಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮೀನುಗಾರರು ಯಾವೂದೇ ಕಾರಣಕ್ಕೂ ಸಮುದ್ರಕ್ಕಿಳಿಯಬಾರದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಲಾಗಿದೆ. ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಮಳೆ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು, ಸಮುದ್ರ ತೀರಕ್ಕೆ ಪ್ರವಾಸಿಗರು ಮತ್ತು ಸಾರ್ವಜನಿಕರು ತೆರಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ.