LATEST NEWS
ಅಯೋಧ್ಯೆ – ಅನಾರೋಗ್ಯ ಪೀಡಿತ ವೃದ್ದೆಯನ್ನು ಮಧ್ಯರಾತ್ರಿ ರಸ್ತೆ ಬದಿಯಲ್ಲಿ ಮಲಗಿಸಿದ ಕುಟುಂಬಸ್ಥರು

ಅಯೋಧ್ಯೆ ಜುಲೈ 25: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ವೃದ್ಧ ಮಹಿಳೆಯೊಬ್ಬರನ್ನು ಆಕೆಯ ಕುಟುಂಬ ಸದಸ್ಯರು ನಡು ರಾತ್ರಿ ರಸ್ತೆಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದು, ಬಳಿಕ ಆಕೆ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ ಘಟನೆ ನಡೆದಿದೆ . ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.
ಕುಟುಂಬದ ಸದಸ್ಯರು ರಾತ್ರಿ ವೇಳೆ ಯಾರೂ ಇಲ್ಲದ ಜಾಗಕ್ಕೆ ಆಟೋವೊಂದರಲ್ಲಿ ಕರೆತಂದು ವೃದ್ಧೆಯನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದ್ದು, ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಾನವೀಯತೆ ಮರೆತ ಕುಟುಂಬಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೇ ಅವರನ್ನು ಹಿಡಿದು ಕಠಿಣ ಶಿಕ್ಷೆ ಕೊಡಿಸುವಂತೆ ಒತ್ತಾಯಿಸುತ್ತಿದ್ದಾರೆ.
ರಸ್ತೆಬದಿಯಲ್ಲಿ ಬಿಟ್ಟುಹೋದ ಸುದ್ದಿಯನ್ನು ಬೆಳಗ್ಗೆ ಯಾರೋ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ವೃದ್ಧ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ವೃದ್ಧೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ, ವೃದ್ಧೆಯನ್ನು ರಸ್ತೆಬದಿಯಲ್ಲಿ ಎಸೆದುಹೋದ ಕುಟುಂಬ ಸದಸ್ಯರನ್ನು ಹುಡುಕಲು ಪ್ರಾರಂಭಿಸಲಾಗಿದೆ. ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಕೊನೆ ಸಾರಿ ವೃದ್ಧೆಯ ಮುಖ ನೋಡಿದ ಸದಸ್ಯರು: ಗುರುವಾರ ಮಧ್ಯ ರಾತ್ರಿ 1:00 ಗಂಟೆಗೆ ಅಯೋಧ್ಯೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶನ್‌ಪುರ ಗ್ರಾಮದ ಬಳಿ ಇ – ರಿಕ್ಷಾದಿಂದ ಇಳಿದ ಇಬ್ಬರು ವ್ಯಕ್ತಿಗಳು, ವೃದ್ಧೆಯನ್ನು ಹಾಸಿಗೆಯೊಂದಿಗೆ ರಸ್ತೆಬದಿಯಲ್ಲಿ ಬಿಟ್ಟು ಹೋಗಿರುವುದು ಹತ್ತಿರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಇ – ರಿಕ್ಷಾ ರಸ್ತೆಬದಿಯಲ್ಲಿ ನಿಂತಿರುವುದು ಕಂಡುಬಂದಿದೆ. ಒಬ್ಬರು ವೃದ್ಧೆಯನ್ನು ಆಕೆಯ ಹಾಸಿಗೆಯೊಂದಿಗೆ ರಸ್ತೆಯ ಬದಿಯಲ್ಲಿ ಮಲಗಿಸಿ ಹಾಳೆಯಿಂದ ಮುಚ್ಚಿದರೆ, ಇನ್ನೊಬ್ಬ ಮಹಿಳೆ ಹಾಳೆ ತೆಗೆದು, ವೃದ್ಧೆಯ ಮುಖವನ್ನು ನೋಡಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಬಂದು ಆಕೆಯನ್ನು ದರ್ಶನ್ ನಗರದಲ್ಲಿರುವ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆ ಫಲಿಸದೇ ವೃದ್ಧೆ ಮೃತಪಟ್ಟಿದ್ದಾರೆ. ಮೃತ ವೃದ್ಧೆಯು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಗಂಟಲಿನಲ್ಲಿ ಗಂಭೀರವಾದ ಗಾಯವಾಗಿತ್ತು. ವೈದ್ಯರು ಜೀವ ಉಳಿಸುವ ಪ್ರಯತ್ನದ ಬಳಿಕವೂ ವೃದ್ಧೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Caught on CCTV: Elderly woman abandoned by family in Ayodhya. #Viral #ViralVideo #Ayodhya pic.twitter.com/WyDdbcZj1Z
— TIMES NOW (@TimesNow) July 25, 2025