LATEST NEWS
ಹೆಡ್‌ಕಾನ್ಸ್‌ಟೇಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಪ್ರಕರಣ – ಎರಡು ಆಡಿಯೋ ಬಹಿರಂಗ

ಉಡುಪಿ ಮೇ 03: ಎಸ್ಎಸ್ಎಲ್ ಸಿ ಪರೀಕ್ಷೆ ಪತ್ರಿಕೆಯ ಭದ್ರತೆಗೆ ನಿಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್ಸ್‌ಟೇಬಲ್ ರಾಜೇಶ್ ಕುಂದರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ರಾಜೇಶ್ ಕುಂದರ್ ಅವರಿಗೆ ನೀಡಿದ್ದ ಕಿರುಕುಳದ ಬಗ್ಗೆ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ.
ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್ಸ್‌ಟೇಬಲ್ ರಾಜೇಶ್ ಕುಂದರ್ ಅವರು ತಮ್ಮ ಮೇಲೆ ಸಹದ್ಯೋಗಿಗಳು ನಡೆಸಿರುವ ದೌರ್ಜನ್ಯದ ಕುರಿತು ಮೇಲಧಿಕಾರಿಗಳಿಗೆ ಕಳುಹಿಸಿರುವ ಮೊಬೈಲ್ ವಾಯ್ಸ್ ರೆಕಾರ್ಡ್‌ಗಳು ಇದೀಗ ಬಹಿರಂಗಗೊಂಡಿವೆ.

ಆಡಿಯೋಗಳಲ್ಲಿ ರಾಜೇಶ್ ಕುಂದರ್ ಅವರು ಗೈರು ಹಾಜರಾಗಿದ್ದ ಇಬ್ಬರು ಸಹೋದ್ಯೋಗಿಗಳ ಮೇಲೆ ದೂರು ನೀಡಿದ್ದಕ್ಕೆ ಅವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಶ್ಫಕ್ ಹಾಗೂ ಉಮೇಶ್ ಅವರು ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲಿಂದ ಹೇಗಾದರು ಮಾಡಿ ತಪ್ಪಿಸಿಕೊಂಡು ಬರಿ ಮೈಯಲ್ಲಿ ರಸ್ತೆಯಲ್ಲಿ ಓಡುತ್ತಿದ್ದೇನೆ. ವಾಹನವೂ ಇಲ್ಲದ್ದರಿಂದ ನಡೆದುಕೊಂಡೇ ಹೋಗುತ್ತಿರುವುದಾಗಿ ಹೇಳಿದ್ದರು. ಅಲ್ಲದೆ, ಸೂಕ್ತ ಕ್ರಮ ಕೈಗೊಳ್ಳಲು ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಸಹಾಯಕ್ಕೆ ಬಾರದಿದ್ದರೆ ಬೇರೆ ಏನಾದರೂ ಮಾಡಿಕೊಳ್ಳುತ್ತೇನೆ ಎಂದೂ ಈ ಆಡಿಯೋದಲ್ಲಿ ಹೇಳಿರುವುದು ದಾಖಲಾಗಿದೆ. ಪೊಲೀಸರು ಸದ್ಯ ಆಡಿಯೋಗಳನ್ನು ಪರಿಶೀಲಿಸುತ್ತಿದ್ದು, ಅದರಲ್ಲಿರುವ ಧ್ವನಿ ರಾಜೇಶ್ ಅವರದ್ದೇ ಆಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.