DAKSHINA KANNADA
ಮಂಗಳೂರು ವಿವಿಯಿಂದ ಅರ್ಥಿಕ ಶ್ವೇತಪತ್ರ ಬಿಡುಗಡೆಗೆ ಹರೀಶ್ ಆಚಾರ್ಯ ಆಗ್ರಹ..!
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ಹಲವಾರು ತಿಂಗಳುಗಳಿಂದ ತೀವ್ರ ಆರ್ಥಿಕ ಅಡಚಣೆಯಿಂದ ಸುದ್ದಿಯಲ್ಲಿದೆ. ಕಳೆದ ಕೆಲವು ತಿಂಗಳುಗಳಿಂದ ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ವೇತನವಿಲ್ಲದೆ ಪರದಾಡುತಿದ್ದಾರೆ.
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಭವಿಷ್ಯನಿಧಿ ಖಾತೆಗಳಿಗೆ ಬಾಕಿಯಿರುವ ಮೊಬಲಗನ್ನೂ ಹೊಂದಿಸಿಕೊಳ್ಳಲಾಗದ ಇಕ್ಕಟ್ಟಿನಲ್ಲಿ ವಿಶ್ವವಿದ್ಯಾನಿಲಯ ಇದೆ. ಸಾರ್ವಜನಿಕ ವಲಯದಲ್ಲಿ ವಿಶ್ವವಿದ್ಯಾನಿಲಯದ ಹಣಕಾಸು ನಿರ್ವಹಣೆ ಹಾಗೂ ಆರ್ಥಿಕ ಶಿಥಿಲತೆಯ ಬಗ್ಗೆ ಗಂಭೀರವಾದ ಪ್ರಶ್ನೆಗಳು ಮೂಡಿದೆ. ಈ ಸಂದೇಹಗಳು ನಿವಾರಣೆಯಾಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯವು ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರವನ್ನು ಹೊರಡಿಸಬೇಕೆಂದು ಮಂಗಳೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ಮಂಗಳೂರು ವಿಶ್ವವಿದ್ಯಾನಿಲಯವನ್ನು ಒತ್ತಾಯಿಸಿದ್ದಾರೆ. ಹಾಗೆಯೇ ಹಳಿ ತಪ್ಪಿರುವ ವಿಶ್ವವಿದ್ಯಾನಿಲಯದ ಅರ್ಥಿಕ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ದೃಷ್ಟಿಯಿಂದ ರಾಜ್ಯ ಸರಕಾರವು ಮಧ್ಯ ಪ್ರವೇಶಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯಾದಿಂದ ನೇಮಕಾತಿಗೊಂಡು ಕೊಡಗು ವಿಶ್ವ ವಿದ್ಯಾನಿಲಯ ಚಿಕ್ಕಲವಾರ ಹಾಗೂ ಆದರ ಘಟಕ ಫೀಲ್ಡ್ ಮಾರ್ಷಲ್ ಕಾವೇರಿಯಪ್ಪ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕಳೆದ ಐದು ತಿಂಗಳುಗಳಿಂದ ವೇತನವಾಗಿರುವುದಿಲ್ಲ. ವಿವಿಯ ಮಂಗಳ ಗಂಗೋತ್ರಿ ಹಾಗೂ ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ ಇಲ್ಲಿಯ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ವಿವಿಯು ವೇತನ ಪಾವತಿ ಮಾಡಲಾಗದೆ ಹತಾಶವಾಗಿದೆ. ಮಡಿಕೇರಿಯಲ್ಲಿ ಕಾಲೇಜು ಉಪನ್ಯಾಸಕರು ಕಳೆದ ಐದಾರು ದಿನಗಳಿಂದ ಪ್ರತಿಭಟನಾ ನಿರತರಾಗಿದ್ದು ಅನ್ನ ಸತ್ಯಾಗ್ರಹದ ನಿರಶನಕ್ಕೆ ಮುಂದಾಗಿದ್ದಾರೆ. ಬೇರೆ ಬೇರೆ ಘಟಕ ಕಾಲೇಜುಗಳ ಸಿಬ್ಬಂದಿಗಳೂ ಸತ್ಯಾಗ್ರಹದ ತಯಾರಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಸಿಬ್ಬಂದಿಗಳು ಮಾತ್ರವಲ್ಲದೇ ಸಾರ್ವಜನಿಕರೂ ವಿವಿಯ ಬಗ್ಗೆ ಹತಾಶರಾಗಿದ್ದಾರೆ ಎಂದು ಹರೀಶ್ ಆಚಾರ್ಯ ಅವರು ಹೇಳಿದ್ದಾರೆ.