DAKSHINA KANNADA
ಬ್ಯಾಂಕ್ ಅಧಿಕಾರಿಗಳ ಕಿರುಕುಳ, ಹೆಚ್ಚಾಗುತ್ತಿರುವ ರೈತರ ಆತ್ಮಹತ್ಯೆಗೆ ರೈತಸಂಘ ಆಕ್ರೋಶ
ಪುತ್ತೂರು, ಮಾರ್ಚ್ 20: ಬ್ಯಾಂಕ್ ಅಧಿಕಾರಿಗಳ ಒತ್ತಡದಿಂದ ಕೃಷಿ ಸಾಲ ಮಾಡಿದ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ಇತ್ತೀಚೆಗೆ ಇಡ್ಕಿದು ಗ್ರಾಮದ ಬಂಗೇರಕೋಡಿ ನಿವಾಸಿ ಕೃಷಿಕ ವೀರಪ್ಪ ಗೌಡ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪಡೆದ ಕೃಷಿ ಅಭಿವೃದ್ಧಿ ಸಾಲವನ್ನು ಮರುಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೀಡಿದಂತೆ ವೀರಪ್ಪ ಗೌಡ ಕುಟುಂಬಕ್ಕೂ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಒತ್ತಾಯಿಸಿದೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಮತ್ತು ಒಕ್ಕೂಟದ ಮುಖ್ಯಸ್ಥರಾಗಿರುವ ರೂಪೇಶ್ ರೈ ಅಲಿಮಾರ್ ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಕೃಷಿಕರಿಗೆ ಒತ್ತಡ ಹಾಕುವಂತಿಲ್ಲ. ಆದರೆ ಇಡ್ಕಿದು ಗ್ರಾಮದಲ್ಲಿ ವೀರಪ್ಪ ಗೌಡರ ಮನೆಗೆ ಬಂದು ತೊಂದರೆ ಕೊಟ್ಟಿದ್ದಾರೆ.
ಇದರಿಂದಾಗಿ ವೀರಪ್ಪ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಸರಕಾರದಿಂದ ರೈತ ಕೊಲೆಯಾದಂತಾಗಿದೆ. ಇದರ ಗುರುತರ ಜವಾಬ್ದಾರಿ ಸರಕಾರ ವಹಿಸಿಕೊಳ್ಳಬೇಕು. ತಕ್ಷಣ ವೀರಪ್ಪ ಗೌಡರ ಇಬ್ಬರು ಮಕ್ಕಳಿಗೆ ಪರಿಹಾರ ಒದಗಿಸಬೇಕು. ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ರೂ. 50ಲಕ್ಷ ಪರಿಹಾರ ನೀಡಬೇಕು. ಮುಂದಿನ ದಿನ ಬ್ಯಾಂಕ್‌ಗಳಿಂದ ಅಧಿಕಾರಿಗಳು ಜಪ್ತಿ ಮಾಡಲು ಬಂದರೆ ರೈತ ಸಂಘ ತಡೆಯೊಡ್ಡುವ ಕೆಲಸ ಮಾಡುತ್ತದೆ ಎಂದು ಜಿಲ್ಲಾಧಿಕಾರಿಗೆ ತಿಳಿಸಲಿದ್ದೇವೆ. ಜಪ್ತಿ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.