KARNATAKA
ಹಂಪಿ ಪ್ರವಾಸೋದ್ಯಮಕ್ಕೆ ಹೊಡೆತ: ಬುಕ್ಕಿಂಗ್‌ಗಳ ರದ್ದು !

ಗಂಗಾವತಿ, ಮಾರ್ಚ್ 11: ವಿದೇಶಿ ಪ್ರವಾಸಿಗರ ಮೇಲೆ ನಡೆದ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಬೆನ್ನಲ್ಲೇ ಪೊಲೀಸರ ಓಡಾಟ ಹೆಚ್ಚಾಗಿದ್ದರಿಂದ ಹಂಪಿ ಮತ್ತು ಆನೆಗೊಂದಿ ಭಾಗದಲ್ಲಿ ಇರುವ ರೆಸಾರ್ಟ್ ಮತ್ತು ಹೊಟೇಲ್‌ಗಳಲ್ಲಿದ್ದ ಪ್ರವಾಸಿಗರು ರೂಮ್‌ಗಳನ್ನು ಖಾಲಿ ಮಾಡುತ್ತಿದ್ದು, ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.
ಘಟನೆ ನಡೆದ ಬಳಿಕ ಹೊಟೇಲ್ ಹಾಗೂ ರೆಸಾರ್ಟ್‌ಗಳಿಗೆ ಪೊಲೀಸರ ಓಡಾಟ ಹೆಚ್ಚಾಗಿದ್ದರಿಂದ ರೆಸಾರ್ಟ್ ಮತ್ತು ಹೊಟೇಲ್‌ಗಳಲ್ಲಿ ತಂಗಿದ್ದ ಪ್ರವಾಸಿಗರು ರೂಮ್‌ಗಳನ್ನು ಖಾಲಿ ಮಾಡಿ ವಾಪಸ್ ತೆರಳುತ್ತಿದ್ದಾರೆ. ಜತೆಗೆಆನ್‌ಲೈನ್‌ಗಳಲ್ಲಿ ರೂಮ್‌ಗಳನ್ನು ಬುಕ್ ಮಾಡಿದ್ದ ಪ್ರವಾಸಿಗರು ರದ್ದುಪಡಿಸಿ ಮುಂಗಡವಾಗಿ ಕೊಟ್ಟ ಹಣವನ್ನು ವಾಪಸ್ ಪಡೆದುಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಹಂಪಿ, ಆನೆಗೊಂದಿ ಭಾಗಕ್ಕೆ ಪ್ರವಾಸಿಗರು ನವೆಂಬರ್‌ನಿಂದ ಎಪ್ರಿಲ್‌ವರೆಗೆ ಆಗಮಿಸುತ್ತಾರೆ. ಸಾಣಾಪೂರ ಭಾಗದಲ್ಲಿನ ಹೊಟೇಲ್‌ಗಳಲ್ಲಿ ತಂಗಿ ಹೋಳಿ ಹಬ್ಬದಲ್ಲಿ ಭಾಗವಹಿಸುತ್ತಾರೆ. ಮಾ.13, 14ರಂದು ಹೋಳಿ ಹಬ್ಬವಿದ್ದು ಈ ಬಾರಿ ಕಹಿ ಘಟನೆ ನಡೆದಿರುವುದರಿಂದ ಹೋಳಿ ಹಬ್ಬ ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆ ಪರವಾನಗಿ ನೀಡುವುದು ಅನುಮಾನ ಮೂಡಿಸಿದೆ. ಹೀಗಾಗಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಲು ಬಂದಿದ್ದ ಪ್ರವಾಸಿಗರು ವಾಪಸ್ ಹೊರಡುತ್ತಿದ್ದಾರೆ. ಅಲ್ಲದೇ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮುಂಗಡವಾಗಿ ರೂಮ್ ಬುಕ್ ಮಾಡಿದ್ದವರು ರದ್ದು ಮಾಡಿ ದುಡ್ಡು ವಾಪಸ್ ಪಡೆಯುತ್ತಿದ್ದಾರೆ.
ಗಂಗಾವತಿ ತಾಲೂಕಿನ ಸಣಾಪುರ ಕೆರೆಯ ಬಳಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿಯನ್ನು ಬಂಧಿಸಿದ್ದು, ಬಂಧಿತ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ| ರಾಮ್ ಅರಸಿದ್ಧಿ ತಿಳಿಸಿದ್ದಾರೆ.
3ನೇ ಆರೋಪಿ ಶರಣಬಸವರಾಜ ಸಾಯಿನಗರ ಎಂದು ಗುರುತಿಸಲಾಗಿದ್ದು, ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ಮೊದಲು ಮಲ್ಲೇಶ ದಾಸರ್, ಚೇತನ್ ಸಾಯಿ ಎಂಬುವರನ್ನು ಬಂಧಿಸಲಾಗಿತ್ತು ಎಂದರು. ವಿದೇಶಿ ಮಹಿಳೆ ಸೇರಿ ಇತರರು ನಿಸರ್ಗ ವೀಕ್ಷಣೆಗೆ ತೆರಳಿದ್ದ ವೇಳೆ ಆರೋಪಿಗಳು ಇವರ ಬಳಿ ನೂರು ರೂ. ಹಣ ಕೇಳಿದ್ದಾರೆ. ಅವರು 20 ರೂ.ಗಳನ್ನು ಕೊಟ್ಟಿದ್ದಾರೆ. ಇದರಿಂದ ಕುಪಿತರಾದ ಮೂವರು ಆರೋಪಿ ಗಳು ವಿದೇಶಿ ಮಹಿಳೆ ಸೇರಿ ಇತರರ ಮೇಲೆ ಹಲ್ಲೆ ಮಾಡಿದರಲ್ಲದೇ ಮೂವರು ಪುರುಷರನ್ನು ನಾಲೆಗೆ ತಳ್ಳಿದ್ದರು. ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದರು.