LATEST NEWS
ಚುನಾವಣಾ ಕಣಕ್ಕೆ ವಿದಾಯ ಹೇಳಿದ ಕುಂದಾಪುರದ ವಾಜಪೇಯಿ “ಹಾಲಾಡಿ ಶ್ರೀನಿವಾಸ ಶೆಟ್ಟಿ”
ಕುಂದಾಪುರ ಎಪ್ರಿಲ್ 03: ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಹೊಂದಿದ್ದ ಸಜ್ಜನ ರಾಜಕಾರಣಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಐದು ಅವಧಿ ಅಂದರೆ 25 ವರ್ಷಗಳ ಕಾಲ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದ ಶಾಸಕರಾಗಿದ್ದವರು, ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇತ್ತು ಎಂದು ಹೇಳಲಾಗಿತ್ತು, ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಈಗಿನ ರಾಜಕೀಯಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ ಎಂಬ ಅಭಿಪ್ರಾಯಗಳನ್ನು ಹಾಲಾಡಿ ತಮ್ಮ ಆಪ್ತರ ಜೊತೆ ಹೇಳಿಕೊಂಡಿದ್ದಾರಂತೆ.
ಕುಂದಾಪುರ ಕ್ಷೇತ್ರದ ಜನ ನನ್ನನ್ನು ಐದು ಬಾರಿ ಆಯ್ಕೆ ಮಾಡಿದ್ದಾರೆ. ಗ್ರಾಮೀಣ ಭಾಗ ಹೆಚ್ಚಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಅವಕಾಶ ಸಿಕ್ಕಿದೆ. ಕುಂದಾಪುರ ಕ್ಷೇತ್ರದ ಶಾಸಕನಾಗಿ ನಿಷ್ಠೆಯಿಂದ, ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ಈ ಬಾರಿ ಸ್ವಇಚ್ಛೆಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಐದು ಬಾರಿ ದಾಖಲೆಯ ಮತಗಳಿಂದ ಗೆಲ್ಲಿಸಿದ್ದಕ್ಕೆ ಧನ್ಯವಾದ. ಅಧಿಕಾರಿ ವರ್ಗ, ಕುಂದಾಪುರ ಜನತೆ -ಮಾಧ್ಯಮಗಳಿಗೆ ಧನ್ಯವಾದ. ಪಕ್ಷದ ಕಾರ್ಯಕರ್ತರಿಗೆ, ಬಿಜೆಪಿ ನಾಯಕರಿಗೆ ಅಭಿಮಾನಿಗಳಿಗೆ ನಾನು ಚಿರಋಣಿ. ನಾಲ್ಕು ಬಾರಿ ಕುಂದಾಪುರದ ಟಿಕೆಟ್ ನೀಡಿದ ಬಿಜೆಪಿಗೆ ಧನ್ಯವಾದಗಳು. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಎಲ್ಲಾ ಮತಬಾಂಧವರು ಸಹಕರಿಸಿ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಎ.ಜಿ ಕೊಡ್ಗಿ ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದರು. ಆರಂಭದ ಎರಡು ಅವಧಿಗಳಲ್ಲಿ ಹಾಲಾಡಿಯ ಗೆಲುವಿನ ಹಿಂದೆ ಕೊಡ್ಗಿ ಬೆಂಬಲ ಇತ್ತು. ಗುರುವಿನ ಋಣವನ್ನು ತೀರಿಸಲು ಎ ಜಿ ಕೊಡ್ಗಿ (AG Kodgi) ಅವರ ಪುತ್ರ ಕಿರಣ್ ಕೊಡ್ಗಿ ಅವರಿಗೆ ಈ ಬಾರಿ ಕುಂದಾಪುರದ ಟಿಕೆಟ್ ಕೊಡಿಸಲು ಹಾಲಾಡಿ ಉತ್ಸುಕರಾಗಿದ್ದಾರೆ. ಹಾಲಾಡಿ ಅವರು ತಮ್ಮ ಹಿತೈಷಿಗಳ ಜೊತೆ ಆಪ್ತರ ಜೊತೆ ಈ ಮಾತುಗಳನ್ನು ಹೇಳಿದ್ದಾರೆ.
ಹಾಲಾಡಿ ರಾಜಕೀಯ ನಿವೃತ್ತಿಯಾಗಿ ಕುಂದಾಪುರದ ಬಿಜೆಪಿ ಟಿಕೆಟ್ ಕೊಡ್ಗಿಗೆ ಸಿಕ್ಕರೆ ಇಡೀ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗುತ್ತದೆ. ಹಾಲಾಡಿ ಬಂಟ ಸಮುದಾಯಕ್ಕೆ ಸೇರಿದ್ದು ಆ ಸಮುದಾಯಕ್ಕೆ ಬೇರೆ ಕಡೆ ಟಿಕೆಟ್ ಕೊಡಬೇಕಾಗುತ್ತದೆ. ಈ ಎಲ್ಲಾ ಲೆಕ್ಕಾಚಾರವನ್ನು ಇಟ್ಟುಕೊಂಡು ಜಿಲ್ಲೆಯ ಕೆಲ ಹಾಲಿ ಶಾಸಕರ ಟಿಕೆಟ್ ತಪ್ಪುವ ಸಾಧ್ಯತೆ ಇದೆ.