LATEST NEWS
ಗುಜರಾತ್ – ತೂಗುಸೇತುವೆ ದುರಂತ ಸಾವಿನ ಸಂಖ್ಯೆ 135ಕ್ಕೆ ಏರಿಕೆ…!!
ಗುಜರಾತ್ ಅಕ್ಟೋಬರ್ 31: ನವೀಕರಣಗೊಂಡು ನಾಲ್ಕು ದಿನಗಳ ಹಿಂದೆಯಷ್ಟೇ ತೆರೆದಿದ್ದ ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ನಿನ್ನೆ ಮುರಿದು ಬಿದ್ದಿದ್ದು, ಈ ಘಟನೆಯಲ್ಲಿ ಸಾವನಪ್ಪಿದವರ ಸಂಖ್ಯೆ 135ಕ್ಕೇ ಏರಿಕೆಯಾಗಿದೆ.
19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ 230 ಮೀಟರ್ ಉದ್ದದ ಈ ಸೇತುವೆಯನ್ನು ನವೀಕರಣದ ಸಲುವಾಗಿ ಕಳೆದ ಆರು ತಿಂಗಳಿನಿಂದ ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ (ಅಕ್ಟೋಬರ್ 26) ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು
ನಿನ್ನೆ ಭಾನುವಾರ ರಜೆ ಹಿನ್ನಲೆ ಹೆಚ್ಚಿನ ಸಂಖ್ಯೆ ಜನರು ಸೇತುವೆ ಮೇಲೆ ಆಗಮಿಸಿದ್ದರು. ಈ ವೇಳೆ ಸೇತುವೆ ಮುರಿದು ಬಿದ್ದಿದೆ. ಈ ವರೆಗೆ 185 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಮತ್ತಷ್ಟು ಜನರು ನಾಪತ್ತೆಯಾಗಿದ್ದು, ಮುಂದಿನ 24 ಗಂಟೆ ವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈವರೆಗೆ 135 ಮಂದಿ ಮೃತಪಟ್ಟಿದ್ದಾರೆ. ತಮ್ಮ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ಮತ್ತಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್), ಅಗ್ನಿಶಾಮಕ ದಳ, ಮುಳುಗು ತಜ್ಞರು ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.