ಅಹಮದಾಬಾದ್, ಏಪ್ರಿಲ್ 05: ಐಪಿಎಲ್ 2026ರ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ 6 ರನ್ಗಳ ಅಂತರದ ಸ್ಮರಣೀಯ ಜಯ ಸಾಧಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಧ್ರುವ್ ಜುರೆಲ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ರವಿ ಬಿಷ್ಣೋಯ್ ಅವರ ಚಾಣಾಕ್ಷ ಬೌಲಿಂಗ್ ರಾಜಸ್ಥಾನ್ ತಂಡಕ್ಕೆ ಸತತ ಎರಡನೇ ಗೆಲುವು ತಂದುಕೊಟ್ಟಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (55 ರನ್, 36 ಎಸೆತ) ಅವರ ಅಬ್ಬರದ ಆಟದ ನೆರವು ಪಡೆಯಿತು. ನಂತರ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಧ್ರುವ್ ಜುರೆಲ್ ಕೇವಲ 42 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 75 ರನ್ ಸಿಡಿಸಿ ತಂಡದ ಮೊತ್ತವನ್ನು 210ಕ್ಕೆ ತಲುಪಿಸಿದರು. ಗುಜರಾತ್ ಪರ ಕಗಿಸೊ ರಬಾಡ 42 ರನ್ ನೀಡಿ 2 ವಿಕೆಟ್ ಪಡೆದರು.
ಪಂದ್ಯದ ನಡುವೆ ಗುಜರಾತ್ ಟೈಟನ್ಸ್ನ ಯುವ ವೇಗಿ ಅಶೋಕ್ ಶರ್ಮಾ ಗಮನ ಸೆಳೆದರು. ಅವರು ಗಂಟೆಗೆ 154.2 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಈ ಸೀಸನ್ನ ಅತ್ಯಂತ ವೇಗದ ಎಸೆತ ದಾಖಲಿಸಿದರು.
211 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ನಾಯಕ ಶುಭಮನ್ ಗಿಲ್ ಅವರ ಅನುಪಸ್ಥಿತಿ ಕಾಡಿತು. ಆರಂಭಿಕರಾಗಿ ಬಂದ ಸಾಯಿ ಸುದರ್ಶನ್ 44 ಎಸೆತಗಳಲ್ಲಿ 73 ರನ್ ಗಳಿಸಿ ತಂಡಕ್ಕೆ ಜಯದ ಆಸೆ ಮೂಡಿಸಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ರವಿ ಬಿಷ್ಣೋಯ್ (4/41) ಅವರ ಮಾರಕ ಸ್ಪಿನ್ ದಾಳಿಯಿಂದಾಗಿ ಗುಜರಾತ್ ಸತತ ವಿಕೆಟ್ ಕಳೆದುಕೊಂಡಿತು. ಕೊನೆಯ ಓವರ್ನಲ್ಲಿ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು. ಆದರೆ ತುಷಾರ್ ದೇಶಪಾಂಡೆ ಎಸೆದ ಶಿಸ್ತುಬದ್ಧ ಓವರ್ನಲ್ಲಿ ಗುಜರಾತ್ ಕೇವಲ 4 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಗುಜರಾತ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಈ ಭರ್ಜರಿ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ +2.233 ರನ್ ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೇರಿದೆ. ಸತತ ಎರಡನೇ ಸೋಲು ಕಂಡಿರುವ ಗುಜರಾತ್ ಟೈಟನ್ಸ್ ಏಳನೇ ಸ್ಥಾನಕ್ಕೆ ಕುಸಿದಿದೆ.