LATEST NEWS
ಜಿಎಸ್ ಬಿ ಸೇವಾ ಮಂಡಲ ಗಣೇಶೋತ್ಸವದಲ್ಲಿ ತುಲಾಭಾರ ಸೇವೆ ಸಮರ್ಪಿಸಿದ RSS ಸರಸಂಘಸಂಚಾಲಕ ಮೋಹನ್ ಭಾಗವತ್
ಮುಂಬೈ ಸೆಪ್ಟೆಂಬರ್ 20: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭಗವಾನ್ ಶ್ರೀ ರಾಮಚಂದ್ರನ ದೇವಾಲಯ ಭವಿಷ್ಯದಲ್ಲಿ ರಾಷ್ಟ್ರಮಂದಿರವಾಗಲಿದೆ. ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಸಂಪೂರ್ಣವಾಗಲು ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಹೇಳಿದರು.
ಅವರು ಮುಂಬೈ ಕಿಂಗ್ಸ್ ಸರ್ಕಲ್ ಬಳಿ ಜಿಎಸ್ ಬಿ ಸೇವಾ ಮಂಡಲದ ವತಿಯಿಂದ ಪೂಜಿಸಲ್ಪಡುತ್ತಿರುವ 69 ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ತುಲಾಭಾರ ಸೇವೆ ಸಮರ್ಪಿಸಿ ಯಾಗದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವು ಪ್ರಯತ್ನ ಮಾಡುವತ್ತ ದೃಢ ಸಂಕಲ್ಪ ಮಾಡಬೇಕು. ಫಲ ನೀಡುವುದು ಭಗವಂತನ ಕೈಯಲ್ಲಿದೆ. ನಾವು ಉತ್ತಮ ಹಾದಿಯಲ್ಲಿ ನಡೆದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ಅವರು ಹೇಳಿದರು. ಜಿಎಸ್ ಬಿ ಸೇವಾ ಮಂಡಲದಲ್ಲಿ ಮೋಹನ್ ಭಾಗವತ್ ಯಾಗದಲ್ಲಿ ಪಾಲ್ಗೊಂಡು ವೈದಿಕರ ಮಾರ್ಗದರ್ಶನದಲ್ಲಿ ಪೂರ್ಣಾಹುತಿ ಸಮರ್ಪಿಸಿದರು. ಮೋಹನ್ ಭಾಗವತ್ ಅವರಿಗೆ ತೆಂಗಿನಕಾಯಿ ತುಲಾಭಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಎಸ್ ಬಿ ಮಂಡಲದ ಪ್ರಮುಖರು, ಕಾರ್ಯಕರ್ತರು, ಭಕ್ತರು ಉಪಸ್ಥಿತರಿದ್ದರು.
ಭಾರತದ ಅತ್ಯಂತ ಶ್ರೀಮಂತ ಗಣಪ ಎಂದೇ ಖ್ಯಾತವಾಗಿರುವ ಮುಂಬೈ ಜಿ. ಎಸ್ ಬಿ ಸೇವಾ ಮಂಡಲದ 69 ನೇ ಶ್ರೀ ಗಣೇಶೋತ್ಸವದಲ್ಲಿ ಕ್ರಿಕೆಟ್ ಪ್ರೇಮಿಗಳ ಪಾಲಿನ ದೇವರು, ಕ್ರಿಕೆಟ್ ಜಗತ್ತಿನ ದಂತಕಥೆ, ಭಾರತ ರತ್ನ ಸಚಿನ್ ತೆಂಡೂಲ್ಕರ್ ಸಪತ್ನೀಕರಾಗಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.