LATEST NEWS
ಕಾಲೇಜು ವಿಧ್ಯಾರ್ಥಿಗಳ ಹೊಡೆದಾಟ – ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆ – 9 ಮಂದಿ ಆರೆಸ್ಟ್
ಮಂಗಳೂರು ಡಿಸೆಂಬರ್ 03: ಹಾಸ್ಟೆಲ್ ನಲ್ಲಿದ್ದ ಕಾಲೇಜು ವಿಧ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕಾಳಗ ನಡೆದಿರುವ ಘಟನೆ ಗುಜ್ಜರಕೆರೆಯ ಸಮೀಪದ ಹಾಸ್ಟೆಲ್ ಒಂದರಲ್ಲಿ ನಡೆದಿದೆ. ಗಲಾಟೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೂ ವಿಧ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ.
ಮಂಗಳೂರಿನ ಖಾಸಗಿ ಕಾಲೇಜು ಒಂದರಲ್ಲಿ ಬಿಎಸ್ಸಿ ಕಲಿಯುತ್ತಿರುವ ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ಡಿಸೆಂಬರ್ 2 ರಂದು ಸಂಜೆ 7 ಗಂಟೆಗೆ ತನ್ನ ಸ್ನೇಹಿತೆ ಜೊತೆ ಮಾತನಾಡುತ್ತಿದ್ದಾಗೆ ಸಿನಾನ್ ಮತ್ತು ಅದೇ ಕಾಲೇಜಿನ ಇತರ ಎಂಟು ವಿದ್ಯಾರ್ಥಿಗಳು ಇಂಟರ್ಲಾಕ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆದರ್ಶ್ ಹಾಗೂ ಮೊಹಮ್ಮದ್ ನಾಸಿಫ್ ಗಾಯಗೊಂಡಿದ್ದಾರೆ. ಗಲಾಟೆ ಬಿಡಿಸಲು ಬಂದಿದ್ದ ಸ್ನೇಹಿತರಾದ ಶನಿನ್ ಮತ್ತು ಶ್ರವಣ್ ಅವರಿಗೆ ಜೀವ ಬೆದರಿಕೆ ಇದೆ ಎಂದು ದೂರುದಾರರು ತಿಳಿಸಿದ್ದಾರೆ.
ಗಲಾಟೆ ಬಿಡಿಸಲು ಬಂದಿದ್ದ ತನ್ನ ಸ್ನೇಹಿತರಾದ ಶನಿನ್ ಮತ್ತು ಶ್ರವಣ್ ಅವರು ಗುಜ್ಜರಕರೆ ಬಳಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದು, ಅವರಿಗೆ ಅಪಾಯ ಇರುವುದರಿಂದ ರಕ್ಷಣೆ ನೀಡುವಂತೆ ಆದರ್ಶ ಪೊಲೀಸರಿಗೆ ಮನವಿ ಮಾಡಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಪಿಎಸ್‌ಐ ಶೀತಲ್ ಹಾಗೂ ಸಿಬ್ಬಂದಿ ಹಾಸ್ಟೆಲ್ ಬಳಿ ಹೋದಾಗ, ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳು ಇಂಟರ್ ಲಾಕ್, ಕಲ್ಲು ಹಾಗೂ ಕುರ್ಚಿಗಳನ್ನು ಎಸೆದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಈ ಸಂಬಂಧ ಆದಿತ್ಯ, ಕೆನ್ ಜಾನ್ಸನ್, ಮೊಹಮ್ಮದ್, ಅಬ್ದುಲ್ ಶಾಹಿದ್ ಮತ್ತು ವಿಮಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ವೈಯಕ್ತಿಕ ದ್ವೇಷವೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, 9 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಡೆದಾಟ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಆದಿತ್ಯ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್, ಫಹದ್, ಅಬುತಹರ್, ಮುಹಮ್ಮದ್ ನಾಸಿಫ್, ಆದರ್ಶ ಬಂಧಿತ ವಿದ್ಯಾರ್ಥಿಗಳು. ಒಟ್ಟು 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.