LATEST NEWS
ಈ ರೀತಿ ಅಮಾನುಷವಾಗಿ ಹತ್ಯೆ ನಡೆಸಿರುವವರೂ ಭಯೋತ್ಪಾದಕರೇ – ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಆರೋಪ

ಮಂಗಳೂರು ಎಪ್ರಿಲ್ 30: ಅಶ್ರಫ್ ಎಂಬ ಯುವಕನ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಪ್ರಕರಣಕ್ಕೂ ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗೂ ವ್ಯತ್ಯಾಸ ಇಲ್ಲ. ಈ ರೀತಿ ಅಮಾನುಷವಾಗಿ ಹತ್ಯೆ ನಡೆಸಿರುವವರೂ ಭಯೋತ್ಪಾದಕರೇ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಕೆ ಆರೋಪಿಸಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ವರ್ಗದ ಯುವಕರನ್ನು ಪ್ರಚೋದಿಸುವ ಕೆಲಸ ಈ ಹಿಂದಿನಿಂದಲೂ ಬಿಜೆಪಿಯಿಂದ ನಡೆಯುತ್ತಿದೆ. ಅವರಿಗೆ ತರಬೇತಿ ಬಜರಂಗದಳ ಮತ್ತಿತರ ವ್ಯವಸ್ಥೆ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಪರಿಣಾಮವಾಗಿ ಹಲವಾರು ಯುವಕರು ಈಗಲೂ ಜೈಲಿನಲ್ಲಿದ್ದಾರೆ, ಕಾನೂನು ಕುಣಿಕೆಯಲ್ಲಿ ಸಿಲುಕಿಕೊಂಡು, ಜೀವನ ಹಾಳು ಮಾಡಿಕೊಂಡಿದ್ದಾರೆ. ಅವರನ್ನೇ ಅವಲಂಬಿಸಿರುವ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ.

ಜಿಲ್ಲೆಯ ಉದ್ಯಮವು ವಲಸೆ ಕಾರ್ಮಿಕರಿಂದ ಅವಲಂಬಿತವಾಗಿದೆ. ಈ ಜಿಲ್ಲೆಯಲ್ಲಿ ಪದೇ ಪದೇ ಶಾಂತಿ ಕಡದುವ ಕೆಲಸ ಆಗುತ್ತಿದೆ ಎಂದರು. ‘ಯುವಕನ ಮೇಲೆ ಗುಂಪು ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯ ವೈಫಲ್ಯವೂ ಇದೆ. ತಳಹಂತದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ತಪ್ಪು ಮಾಹಿತಿ ನೀಡಿರುವ ಸ್ಥಳೀಯ ಇನ್‌ಸ್ಪೆಕ್ಟರ್ ಅನ್ನು ಅಮಾನತುಗೊಳಿಸಬೇಕು ಎಂದು ಗೃಹ ಸಚಿವರಿಗೆ ಕಾಂಗ್ರೆಸ್ ವತಿಯಿಂದ ಪತ್ರ ಬರೆಯಲಾಗಿದೆ. ಮೃತ ಯುವಕನ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಲಾಗುವುದು’ ಎಂದು ಹೇಳಿದರು.