Connect with us

    DAKSHINA KANNADA

    ಭ್ರಷ್ಟಾಚಾರಕ್ಕೆ ದುರಾಸೆಯೇ ಮೂಲ ಕಾರಣ: ನ್ಯಾ.ಸಂತೋಷ್ ಹೆಗ್ಡೆ

    ಪುತ್ತೂರು, ಫೆಬ್ರವರಿ 27: ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆಯೇ ಮೂಲ ಕಾರಣ. ಎಲ್ಲಾ ಕಾಯಿಲೆಗಳಿಗೆ ಔಷಧಿಯಿದ್ದರೂ ದುರಾಸೆಗೆ ಔಷಧಿಯಿಲ್ಲ. ಇದನ್ನು ಹೋಗಲಾಡಿಸಲು ಮಹಾತ್ಮ ಗಾಂಧಿ ಹೇಳಿದ ಒಂದೇ ದಾರಿ ತೃಪ್ತಿ. ತೃಪ್ತಿಯಿಂದ ದುರಾಸೆಯನ್ನು ಮಟ್ಟ ಹಾಕಬಹುದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.

    ಪುತ್ತೂರಿನ ಜೈನ ಭವನದಲ್ಲಿ ಪುತ್ತೂರು ಗಾಂಧಿ ವಿಚಾರ ವೇದಿಕೆ ಹಾಗೂ ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಭಾನುವಾರ ನಡೆದ ‘ಕರ್ನಾಟಕದ ಇಂದಿನ ಅಗತ್ಯತೆಗಳು’ ವಿಷಯದ ಕುರಿತ ಜನಸಂವಾದ ಕಾರ್ಯಕ್ರಮದಲ್ಲಿ ಅವರು ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷ ಆಡಳಿತ ಎಂಬ ವಿಚಾರದಲ್ಲಿ ಮಾತನಾಡಿದರು.

    ದುರಾಸೆ ಇದ್ದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಇರಲು ಸಾಧ್ಯವಿಲ್ಲ. ದುರಾಸೆ ವಿಚಾರದಲ್ಲಿ ರಾಜಕೀಯ ಮೇಲುಗೈ ಸಾಧಿಸಿದೆ. ಧರ್ಮ-ಭಾಷೆಯ ದುರ್ಬಳಕೆ ಆಗುತ್ತಿದೆ. ಹಿಂದೆ ರಾಜಕೀಯ ನಿಜವಾದ ಜನಸೇವೆಯಲ್ಲಿ ತೊಡಗಿಕೊಂಡಿತ್ತು. ಪ್ರಸ್ತುತ ನಿಜವಾದ ಜನಸೇವೆ ಆಗುತ್ತಿದೆಯಾ ಎಂದು ಪ್ರಶ್ನಿಸಿದ ಅವರು, ಬದಲಾವಣೆಯನ್ನು ಶಾಂತಿಯುತವಾಗಿ ತರಬೇಕಾಗಿದೆ. ಇದಕ್ಕೆ ಇಂತಹ ಕಾರ್ಯಕ್ರಮಗಳು ಪೂರಕ ಎಂದರು.

    ಹಿರಿಯರು ಕಟ್ಟಿದ ಮೌಲ್ಯ ಮಾನವೀಯತೆ ಒಂದಾಗಿದೆ. ಜೀವನ ಪಥದಲ್ಲಿ ಮಾನವೀಯ ಮೌಲ್ಯದ ಪಾತ್ರ ಬಹುಮುಖ್ಯವಾಗಿದ್ದು, ಇದಕ್ಕೆ ಸಿಗುವ ಗೌರವ ಬೇರೆ ಯಾವುದಕ್ಕೂ ಸಿಗಲ್ಲ. ಭವಿಷ್ಯದಲ್ಲಿ ಬದಲಾವಣೆ ತರಬೇಕಾದರೆ ಮಕ್ಕಳಲ್ಲಿ ಈ ಕುರಿತು ಹುರಿದುಂಬಿಸಬೇಕು. ಆಗ ಪ್ರಜಾಪ್ರಭುತ್ವದ ಅರ್ಥವನ್ನು ಮಕ್ಕಳು ತಿಳಿಯಲು ಸಾಧ್ಯ ಎಂದರು.

    ‘ಸಾಮಾಜಿಕ ಅಗತ್ಯಗಳು’ ಎಂಬ ವಿಷಯದ ಕುರಿತು ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ‘ಪ್ರಸ್ತುತ ಪ್ರಗತಿಯ ಮಾನದಂಡಗಳಿಂದ ಆರೋಗ್ಯ ಕ್ಷೀಣಿಸುತ್ತಿದೆ. ಶಿಕ್ಷಣದ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತಿವೆ. ಸಾಮಾಜಿಕವಾಗಿ ಇದನ್ನು ಸರಿಮಾಡಬೇಕಾಗಿದೆ. ಸಾಮಾಜಿಕ ವ್ಯವಸ್ಥೆಯ ಮೌಲ್ಯ ದುಡ್ಡಿನಿಂದ ಅಳೆಯಲಾಗುತ್ತಿದ್ದು, ಮೌಲ್ಯ ಕಳೆದುಕೊಳ್ಳುತ್ತಿದೆ. ಭಾಷೆ, ಧರ್ಮ, ಸಂಸ್ಕೃತಿಯ ಕುರಿತು ವಿಚಾರ ಮಾಡಬೇಕಾದ ಈ ಸಂದರ್ಭದಲ್ಲಿ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ಕರಾವಳಿಯ ಧಾರಣಾ ಶಕ್ತಿಯನ್ನು ಕಾಲಕಾಲಕ್ಕೆ ಆಧ್ಯಯನ ಮಾಡಬೇಕಾದ ಅಗತ್ಯವಿದೆ’ ಎಂದು ಹೇಳಿದರು.

    ‘ಯುವ ಜನತೆಯ ಅಗತ್ಯಗಳು’ ಎಂಬ ವಿಷಯದ ಕುರಿತು ಗಾಂಧಿ ವಿಚಾರ ವೇದಿಕೆಯ ವ್ಯವಸ್ಥಾಪಕ ಸದಸ್ಯ, ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿಯ ಎನ್.ಎಂ.ಬಿರಾದಾರ ಮಾತನಾಡಿ, ‘ನಾಡಿನ ಭವಿಷ್ಯ ಯುವ ಜನತೆಯ ಕೈಯಲ್ಲಿದ್ದು, ಪ್ರಸ್ತುತ ಯುವಕ- ಯುವತಿಯರು ಯಾವ ಕಡೆ ವಾಲುತ್ತಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ. ಮದ್ಯಪಾನ, ಡ್ರಗ್ಸ್‌ ಚಟಗಳಿಗೆ ಯುವಜನತೆ ಬಲಿ ಬೀಳುತ್ತಿದ್ದು, ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವಲ್ಲಿ ಪೋಷಕರು ವಿಫಲರಾಗಿದ್ದಾರೆ. ಸರಿಯಾದ ಮಾರ್ಗದರ್ಶನದ ಕೊರತೆ ದಾರಿ ತಪ್ಪಲು ಕಾರಣವಾಗಿದೆ. ಜತೆಗೆ ಆಲೋಚನೆಗಳ ಕೊರತೆಯಿಂದ ಕಲಿಕೆಯಲ್ಲಿ ಹಿಂದೆ ಬೀಳುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

    ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕದ ಅಧ್ಯಕ್ಷ ಝೇವಿಯರ್ ಡಿ.ಸೋಜ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ವಿಲ್ಫ್ರೆಡ್ ಡಿ.ಸೋಜ, ಗಾಂಧಿ ವಿಚಾರ ವೇದಿಕೆಯ ಮಾತೃ ಘಟಕದ ಅಧ್ಯಕ್ಷ ಶ್ರೀಧರ ಭಿಡೆ, ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಇಸ್ಮಾಯಿಲ್ ಮಾತನಾಡಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉಪಸ್ಥಿತರಿದ್ದರು.

    ಗಾಂಧಿ ವಿಚಾರ ವೇದಿಕೆಯ ಮಾತೃ ಘಟಕದ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಸ್ವಾಗತಿಸಿದರು. ತಾಲ್ಲೂಕು ಘಟಕದ ಉಪಾಧ್ಯಕ್ಷ ಗೋಪಾಲಕೃಷ್ಣ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು. ವೇದಿಕೆಯ ಆಡಳಿತ ಮುಖ್ಯಸ್ಥ ಭಾಗ್ಯೇಶ್, ವೇದಿಕೆಯ ಚಿನ್ಮಯ್ ಕೃಷ್ಣ, ಅರವಿಂದ ಚೊಕ್ಕಾಡಿ, ಚಂದ್ರಹಾಸ ರೈ ಇದ್ದರು.

    ‘ಪಶ್ಚಿಮ ಘಟ್ಟ ಸೂಕ್ಷ ಪ್ರದೇಶವಾಗಿದ್ದು, ಅಭಿವೃದ್ಧಿ ನಿಟ್ಟಿನಲ್ಲಿ ಹಾನಿ ಮಾಡಲಾಗುತ್ತಿದ್ದು ಈ ಕುರಿತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ’ ಎಂದು ಸಂವಾದದಲ್ಲಿ ವಿದ್ಯಾರ್ಥಿನಿ ಶ್ವೇತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ, ‘ಪರಿಸರ ರಕ್ಷಣೆಯಲ್ಲಿ ಸಾಕಷ್ಟು ಅನ್ಯಾಯಗಳಾಗುತ್ತಿದ್ದು, ಈ ಕುರಿತು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್‌ಗೆ ಹೋಗುವುದೊಂದೇ ದಾರಿ’ ಎಂದರು.

    ‘ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಕಾನೂನಿನಿಂದ ಸಾಧ್ಯವಿಲ್ಲವೇ’ ಎಂಬ ವಿದ್ಯಾರ್ಥಿನಿ ರಕ್ಷಿತಾ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ, ‘ನಿರ್ಧಾರ ತೆಗೆದುಕೊಳ್ಳಬೇಕಾದ ಶಕ್ತಿ ಬೇಕು. ಅಧಿಕಾರದಲ್ಲಿದ್ದವರಿಗೆ ತುಳು ಭಾಷೆ ತಿಳಿಯದಿರುವುದರಿಂದ ಭಾವನೆಗಳೇ ಬೇರೆಯಾಗಿದೆ’ ಎಂದು ಉತ್ತರಿಸಿದರು.

    ‘ಭ್ರಷ್ಟಾಚಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಾಕೆ ಎಡವಲಾಗುತ್ತಿದೆ’ ಎಂಬ ದೀಪ್ತಿ ರೈ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ, ‘ಅಕ್ರಮವಾಗಿ ಸಂಪಾದಿಸಿದ ಚರ, ಸೊತ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕಾಗಿರುವುದು ಕಾನೂನು. ಈ ವಿಚಾರಲ್ಲಿ ಭ್ರಷ್ಟಾಚಾರಿಗಳಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಆದರೆ, ಅಕ್ರಮ ಸಂಪಾದನೆಯ ಚರ ಸೊತ್ತುಗಳು ಮುಟ್ಟುಗೋಲು ಆಗದಿರುವುದು ವಿಷಾದನೀಯ’ ಎಂದರು.

    ‘ಹಲವಾರು ಕೇಸುಗಳು ಸರಿಯಾಗಿ ಇತ್ಯರ್ಥಗೊಳ್ಳದೆ ನ್ಯಾಯಾಲಯದ ಹಿಂದೆ ಸರಿಯುತ್ತಿದೆ’ ಎಂಬ ಸರ್ವೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ, ‘ವೈಯಕ್ತಿಕ ವಿಚಾರಗಳನ್ನು ನ್ಯಾಯಾಲಯದ ಕಟಕಟೆಗೆ ತರಬಾರದು. ಹೆಚ್ಚಿನ ಪ್ರಕರಣಗಳು ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿರುವುದರಿಂದ ಸರಿಯಾಗಿ ಇತ್ಯರ್ಥ ಆಗುತ್ತಿಲ್ಲ’ ಎಂದರು.

    ‘ನ್ಯಾಯಾಂಗ, ಕಾರ್ಯಾಂಗದ ಹುದ್ದೆಯಿಂದ ನಿವೃತ್ತಿಯಾದವರು ಸರ್ಕಾರಿ ಅಥವಾ ಖಾಸಗಿಯಾಗಿ ಬೇರೆ ಹುದ್ದೆಗಳನ್ನು ನಿಭಾಯಿಸುವುದು ಸರಿಯೇ, ತಪ್ಪೇ’ ಎಂದು ರಾಜೇಶ್ ಕೃಷ್ಣಪ್ರಸಾದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ, ‘ಏನೂ ತಪ್ಪಿಲ್ಲ, ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರು ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಅಲ್ಲದೆ, ಮತ್ತೊಬ್ಬ ನ್ಯಾಯಾಧೀಶರು ರಾಜಕೀಯಕ್ಕೂ ಸೇರಿದ್ದಾರೆ. ಇಲ್ಲಿ ಮುಖ್ಯ ವಿಚಾರ ಎಂದರೆ ಒಳ್ಳೆಯ ಉದ್ದೇಶ ಇಟ್ಟು ರಾಜಕೀಯಕ್ಕೆ ಹೋದರೆ ತಪ್ಪಿಲ್ಲ’ ಎಂದರು.

    ‘ಸರ್ಕಾರಿ ಅನುದಾನವನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಹುದೇ’ ಎಂದು ಶಿಕ್ಷಕ ಉದಯ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ, ‘ಕಾನೂನಿನಲ್ಲಿ ವಿದ್ಯೆ, ಆರೋಗ್ಯದ ಕುರಿತ ಜವಾಬ್ದಾರಿ ಸರ್ಕಾರದ್ದು. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಹಣ ವರ್ಗಾವಣೆ ಮಾಡುವುದು ಸರಿಯಲ್ಲ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *