BELTHANGADI
ಕಾರ್ಕಳದಲ್ಲಿ ನಾಪತ್ತೆಯಾಗಿದ್ದ ಅಜ್ಜಿ ಬೆಳ್ತಂಗಡಿಯಲ್ಲಿ ಪತ್ತೆ
ಬೆಳ್ತಂಗಡಿ, ಜುಲೈ 06: ಕಳೆದ ಭಾನುವಾರದಿಂದ ನಾಪತ್ತೆಯಾಗಿದ್ದ ಕಾರ್ಕಳ ಮೂಲದ ವೃದ್ಧೆಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ದಾರೆ.ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನೆಲ್ಲಿಗುಡ್ಡೆಯ ಹಳೆಕಟ್ಟಿ ನಿವಾಸಿಯಾಗಿರುವ ಸಾವಿತ್ರಿ ಭಟ್ (82) ಎಂಬವರು ಪತ್ತೆಯಾದ ಅಜ್ಜಿ ಆಗಿದ್ದಾರೆ.
ಇವರ ಮಗಳಾದ ವಿಜಯಾ ಭಟ್ ಅವರನ್ನು ಬೆಳ್ತಂಗಡಿಯ ಕಳಿಯ ಗ್ರಾಮದ ನಾಳಕ್ಕೆ ಮದುವೆಯನ್ನು ಮಾಡಿಕೊಡಲಾಗಿತ್ತು .ಸದ್ಯ ಅಜ್ಜಿ ಸಾವಿತ್ರಿ ಭಟ್ ಹಳೆ ಕಟ್ಟೆಯಲ್ಲಿರುವ ಮಗ ಸತೀಶ್ ಜೊತೆ ವಾಸವಾಗಿದ್ದರು .ಆದರೆ ಭಾನುವಾರದಂದು ಅಜ್ಜಿ ಸಾವಿತ್ರಿಯವರು ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದರು.
ಆದರೆ ಸೋಮವಾರ ಸಂಜೆಯ ವೇಳೆಗೆ ಉಜಿರೆಯ ಅತ್ತಾಜೆ ನಿವಾಸಿ ವಿಜಯ್ ಎಂಬವರು ಲಾಯ್ಲ ಬ್ರಿಡ್ಜ್ ಬಳಿ ಅಜ್ಜಿ ಮಳೆಯಲ್ಲಿ ನಿಂತಿರುವುದನ್ನು ಕಂಡು ವಿಚಾರಿಸಿದ್ದಾರೆ. ಆಗ ಅವರಿಂದ ಸರಿಯಾದ ಮಾಹಿತಿ ದೊರಕಿರಲಿಲ್ಲ .ನಂತರ ವಿಡಿಯೋವೊಂದನ್ನು ಮಾಡಿದ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಬಳಿಕ ಪೊಲೀಸ್ ಸಹಾಯವಾಣಿ 112 ಕರೆ ಮಾಡಿ ಮಾಹಿತಿಯನ್ನು ನೀಡಿದರು. ಬಳಿಕ ಅಜ್ಜಿ ಸಾವಿತ್ರಿ ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಠಾಣೆಯಲ್ಲಿ ಪೊಲೀಸರು ಅಜ್ಜಿಯ ಬಳಿ ಇರುವ ಬ್ಯಾಗನ್ನು ತೆರೆದು ಪರಿಶೀಲನೆ ನಡೆಸಿ ವಿಳಾಸವನ್ನು ತಡಕಾಡಿದಾಗ ಸಾವಿತ್ರಿಯವರು ಕಾರ್ಕಳ ಮೂಲದವರು ಎಂದು ಗೊತ್ತಾಗಿದೆ.
ಅಜ್ಜಿಯ ವಿಳಾಸವನ್ನು ಪತ್ತೆ ಹಚ್ಚಿದ ಪೋಲಿಸರು ಸಾವಿತ್ರಿಯವರನ್ನು ಮನೆಯವರಿಗೆ ಹಸ್ತಾಂತರಿಸಿದ್ದಾರೆ. ಉಜಿರೆಯ ಅತ್ತಾಜೆ ನಿವಾಸಿ ವಿಜಯ್ ಹಾಗು ಬೆಳ್ತಂಗಡಿ ಪೊಲೀಸರ ಈ ಮಾನವೀಯ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.