Connect with us

    KARNATAKA

    ಜಿ.ಆರ್.ಮೆಡಿಕಲ್ ಕಾಲೇಜು ಸೀಟು ವಿವಾದ : ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತ KEA ಕ್ರಮ,ವೈದ್ಯಕೀಯ ವಿದ್ಯಾರ್ಥಿಗಳು ಅತಂತ್ರ-ಲೋಕೇಶ್ ರಾಂ

    ಬೆಂಗಳೂರು : ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿದ್ದು ವೈದ್ಯ ಆಕಾಂಕ್ಷಿಗಳಿಗೆ ಸಾಕಷ್ಟು ಅವಕಾಶ ಸಿಗುತ್ತಿಲ್ಲ. ಹೀಗಿರುವಾಗ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವೈದ್ಯ ವಿದ್ಯಾರ್ಥಿಗಳ ಭವಿಷ್ಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ಚೆಲ್ಲಾಟವಾಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. 

    ಪ್ರಸಕ್ತ ಮಂಗಳೂರಿನ ಜಿ,ಆರ್.ಮೆಡಿಕಲ್ ಕಾಲೇಜಿಗೆ ಅನುಮತಿ ನೀಡಿಲ್ಲ ಎಂಬ ನೆಪದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತಕ್ಕನುಗುಣವಾಗಿ ಸರ್ಕಾರ ಕ್ರಮ ಕೈಗೊಳ್ಳುವ ಬದಲು ವಿದ್ಯಾರ್ಥಿ ಸಮುದಾಯವನ್ನೇ ಹಾದಿ ತಪ್ಪಿಸಿ ಯುವಜನರ ಭವಿಷ್ಯವನ್ನೇ ಅತಂತ್ರವಾಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ಪಂಗಡ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಅಧ್ಯಕ್ಷರಾದ ಲೋಕೇಶ್ ರಾಂ ಆರೋಪಿಸಿದ್ದಾರೆ.

    ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಂಗಳೂರಿನ ಜಿ,ಆರ್.ಮೆಡಿಕಲ್ ಕಾಲೇಜು ಸೀಟು ವಿವಾದ ಕುರಿತಾಗಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಜಿ.ಆರ್.ಮೆಡಿಕಲ್ ಕಾಲೇಜಿನ ಅನುಮತಿ ವಿಷಯ ಪ್ರಸಕ್ತ ಹೈಕೋರ್ಟ್’ನಲ್ಲಿ ವಿಚಾರಣಾ ಹಂತದಲ್ಲಿರುವುದು ಸರ್ಕಾರಕ್ಕೆ ತಿಳಿದಿದೆ. ಸದರಿ ವೈದ್ಯಕೀಯ ಕಾಲೇಜಿನಲ್ಲಿ ಮೂಲಸೌಕರ್ಯ ಇದೆ ಎಂದು ಬಹುತೇಕ ವಿದ್ಯಾರ್ಥಿಗಳು ನಮ್ಮ ಸಂಘಟನೆಯ ಪ್ರಮುಖರೊಂದಿಗೆ ಹೇಳಿಕೊಂಡಿದ್ದಾರೆ.

    ಜೊತೆಗೆ ವಿಶ್ವವಿದ್ಯಾಲಯ ನಡೆಸಿರುವ ಕಳೆದ ಪರೀಕ್ಷೆಯಲ್ಲಿ ಇತರ ಕಾಲೇಜುಗಳಿಗಿಂತ ಈ ಕಾಲೇಜಿನಲ್ಲೇ ಹೆಚ್ಚು ಉತ್ತಮ ಫಲಿತಾಂಶ ಬಂದಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಹೀಗಿದ್ದರೂ ಕೆಲವು ಮಾಫಿಯಾ ಸುಳಿಯಲ್ಲಿ ಸಿಲುಕಿರುವ ವ್ಯಕ್ತಿಗಳು ಕಾಲೇಜು ಆರಂಭವಾದ ಒಂದು ವರ್ಷದ ಬಳಿಕ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಮರು ಹಂಚಿಕೆ ಮಾಡುವಂತೆ ಪಿತೂರಿ ನಡೆಸಿದ್ದಾರೆ.

    ಈ ಬೆಳವಣಿಗೆ ಬಗ್ಗೆ ಅಧಿಕಾರಿಗಳು ತಿಳಿಯುವ ಪ್ರಯತ್ನ ಮಾಡದಿರುವುದನ್ನು ಗಮನಿಸಿದರೆ, ವೈದ್ಯಕೀಯ ಶಿಕ್ಷಣ ಇಲಾಖೆಯೂ ಮಾಫಿಯಾದ ಹಿಡಿತದಲ್ಲಿ ಸಿಲುಕಿದೆಯೇ ಎಂಬ ಅನುಮಾನ ಮೂಡುತ್ತಿದೆ. ಮಾನ್ಯ ಹೈಕೋರ್ಟ್’ನ ಆದೇಶವನ್ನು ವ್ಯತಿಕ್ತವಾಗಿ ಅರ್ಥೈಸಿ ಜಿ.ಆರ್.ಮೆಡಿಕಲ್ ಕಾಲೇಜಿನ ವಿದ್ಯಾಥಿಗಳನ್ನು ಬೇರೆ ಕಾಲೇಜಿಗೆ ಕಳುಹಿಸಿ ಸದರಿ ಕಾಲೇಜನ್ನು ಸಂಪೂರ್ಣವಾಗಿ ಮುಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾದಂತಿದೆ.

    ಮಾನ್ಯ ಹೈಕೋರ್ಟ್’ನ ಆದೇಶ ಒಂದು ರೀತಿಯಲ್ಲಿದ್ದರೆ ರಾಜ್ಯ ಸರ್ಕಾರದ ನಡೆ ಮತ್ತೊಂದು ರೀತಿ ಇದೆ.

    ಮಾನ್ಯ ಹೈಕೋರ್ಟ್’ನ ಆದೇಶವನ್ನೇ ತಮಗಿಷ್ಟ ಬಂದಂತೆ ಅರ್ಥೈಸಿ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ರೀತಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ KEA ಕ್ರಮ ಕೈಗೊಂಡಿದೆ.

    ದೇಶದ ವೈದ್ಯಕೀಯ ಕಾಲೇಜುಗಳ ಅನುಮತಿ ವಿಚಾರದಲ್ಲಿ NMC ಕಣ್ಣಾಮುಚ್ಚಾಲೆ ಆಡುತ್ತಿರುವ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಲೇ ಇವೆ.

    ಅದೇ ರೀತಿ ರಾಜಕೀಯ ಲಾಭಿ ಹಿನ್ನೆಲೆಯಲ್ಲಿ ರಾಜ್ಯದ ವೈದ್ಯಕೀಯ ಕಾಲೇಜಿನ ಅನುಮತಿ ವಿಚಾರದಲ್ಲಿ NMC ಗೊಂದಲ ಸೃಷ್ಟಿಸಿದೆ.

    ಈಮೇಲ್ ನಿಂದ ರವಾನೆಯಾಗುತ್ತಿರುವ ಡಿಜಿಟಲ್ ಸಿಗ್ನೇಚರ್ ಇಲ್ಲದ ಪತ್ರಗಳು ಫೇಕ್ ಆಗಿರುತ್ತದೆ ಎಂದು ಸೆ.4 ರಂದು ಸ್ವತಹ NMC ಯೇ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದರೂ ಸಂಶಯಾಸ್ಪದ ಪತ್ರವನ್ನು ಪರಿಶೀಲಿಸದೆ ತರಾತುರಿಯಲ್ಲಿ ಕ್ರಮ ಕೈಗೊಂಡಿರುವುದು ಸಮರ್ಪಕವಲ್ಲ.

    ಆದಾಗಿಯೂ ಬೇರೆ ಕಾಲೇಜುಗಳಿಗೆ ಸ್ಥಳಾಂತರ ಕೋರಿ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯು ಮಾನ್ಯ ಹೈಕೋರ್ಟ್’ನಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು NMCಗೆ ಪತ್ರ ಬರೆದು ಅನುಮತಿ ಕೋರಿರುವುದು ಸರಿಯೇ?

    ಮಾನ್ಯ ಹೈಕೋರ್ಟ್’ನ ವಿಚಾರಣಾ ಹಂತದಲ್ಲೇ NMC ಅನುಮತಿ ನೀಡಲು ಸಾಧ್ಯಯೇ? ಎಂಬ ಬಗ್ಗೆ ಪರಾಮರ್ಶಿಸದೆ NMCಯ ಹೆಸರಲ್ಲಿ ಬಂದಿರುವ ಪತ್ರವನ್ನು ಪರಿಶೀಲಿಸದೆ ವಿದ್ಯಾರ್ಥಿಗಳ ಮರು ಹಂಚಿಕೆಗೆ ಕ್ರಮ ವಹಿಸಿರುವುದು ಸರಿಯಾದ ಕ್ರಮವಲ್ಲವೆಂದು ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ಪಂಗಡ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟಅಧ್ಯಕ್ಷರಾದ ಲೋಕೇಶ್ ರಾಂ ಹೇಳಿಕೆ ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *