LATEST NEWS
ಅಕ್ರಮ ಚಟುವಟಿಕೆ ಹಿನ್ನಲೆ ಕೊಡಚಾದ್ರಿ ತಪ್ಪಲಿನ ಗೋವಿಂದ ತೀರ್ಥ ಜಲಪಾತ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ

ಉಡುಪಿ ಜೂನ್ 27: ಕೊಡಚಾದ್ರಿ ತಪ್ಪಲಿನ ಬೆಳ್ಕಲ್ ಗ್ರಾಮದ ಗೋವಿಂದ ತೀರ್ಥ ಜಲಪಾತದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧಿಸಿದೆ.
ಮೂಕಾಂಬಿಕಾ ರಕ್ಷಿತಾರಣ್ಯದ ಒಳಗಿರುವ ಈ ಅದ್ಭುತ ಜಲಾಶಯದಲ್ಲಿ ನೀರು 600 ಅಡಿ ಎತ್ತರದಿಂದ ಕೆಳಗೆ ಧುಮ್ಮಿಕ್ಕುತ್ತದೆ. ಅತ್ಯಂತ ಪವಿತ್ರ ಕ್ಷೇತ್ರವಾಗಿರುವ ಈ ಗೋವಿಂದ ತೀರ್ಥದಲ್ಲಿ ಇತ್ತೀಚೆಗೆ ಹೊರಜಿಲ್ಲೆಗಳ ಪ್ರವಾಸಿಗರು ಬಂದು ಮದ್ಯಸೇವನೆ ಅನೈತಿಕ ವರ್ತನೆ ಮತ್ತು ಪರಿಸರ ಮಾಲಿನ್ಯ ಮಾಡುತ್ತಿರುವ ವಿರುದ್ಧ ಹಿಂದೂ ಜಾಗರಣ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಗೋವಿಂದ ತೀರ್ಥ ಪರಿಸರವನ್ನು ಸ್ವಚ್ಛಗೊಳಿಸಿದ ಬಳಿಕ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕೊಲ್ಲೂರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ತೀರ್ಥದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮಹತ್ವದ ನಿರ್ಣಯ ಕೈಗೊಂಡಿದ್ದು, ಗೋವಿಂದ ತೀರ್ಥಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಈ ನಿರ್ಬಂಧವು ಮುಂದಿನ ಆದೇಶದವರೆಗೂ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.