LATEST NEWS
ಕಂಬಳಕ್ಕೆ ಇಲ್ಲದ ಟೈಮ್ ಲಿಮಿಟ್…ಸರಕಾರದ ನಿರ್ದೇಶನ ಸಂಪೂರ್ಣ ನಿರ್ಲಕ್ಷ್ಯ
ಮಂಗಳೂರು ಜನವರಿ 14: ಕರಾವಳಿಯ ಜಾನಪದ ಕ್ರೀಡೆ ಕಂಬಳ, ಪೇಟಾದ ಹೊಡೆತವನ್ನು ತಡೆದು ಮತ್ತೆ ಎದ್ದು ನಿಂತಿದೆ. ಪ್ರತಿ ಭಾರಿಯೂ ಕಂಬಳದಲ್ಲಿ ನಡೆಯುವ ವಿಚಾರಗಳನ್ನು ಇಟ್ಟುಕೊಂಡು ನ್ಯಾಯಾಲಯ ಮೆಟ್ಟಿಲನ್ನು ಪೇಟಾ ಹತ್ತುತ್ತಲೇ ಇದೆ. ಈ ನಡುವೆ ಸುಪ್ರೀಂಕೋರ್ಟ್ ನಿರ್ದೇಶನ ಪಾಲಿಸಿ 24 ಗಂಟೆಯೊಳಗೆ ಆಯೋಜಿಸಬೇಕೆಂದು ರಾಜ್ಯ ಸರಕಾರ ನಿರ್ದೇಶನವನ್ನು ಕಂಬಳ ಆಯೋಜಕರು ಪ್ರತೀ ಬಾರಿಯೂ ನಿರ್ಲಕ್ಷಸುತ್ತಲೇ ಬಂದಿದ್ದಾರೆ. ಕಂಬಳ ಸಮಿತಿಯ ಸೂಚನೆಗಳಿಗೂ ಕೂಡ ಕಂಬಳ ಆಯೋಜಕರು ಕ್ಯಾರೆ ಅನ್ನುತ್ತಿಲ್ಲ.
ಕರಾವಳಿಯಲ್ಲಿ ಇದೀಗ ಕಂಬಳ ಸೀಸನ್ , ಈ ಸೀಸನ್ ನಲ್ಲಿ ಈಗಾಗಲೇ 6 ಕಂಬಳಗಳು ಮುಗಿದಿವೆ. ಆದರೆ ರಾಜ್ಯ ಸರಕಾರ ಕಂಬಳಕ್ಕೆ ನೀಡಿದ್ದ ಸೂಚನೆಯನ್ನು ಎಲ್ಲಾ ಕಂಬಳದಲ್ಲೂ ಮೀರಲಾಗಿದೆ.
ಕಂಬಳ ಸೀಸನ್ ಆರಂಭವಾಗುವ ಮೊದಲು ಹಾಗೂ ನಂತರ ಹಂತಹಂತವಾಗಿ ಕಂಬಳ ಸಮಿತಿ ಸಭೆ ನಡೆಸಿ 24 ರಿಂದ 30 ಗಂಟೆಯೊಳಗೆ ಕಂಬಳ ಮುಗಿಸಬೇಕು ಎಂದು ನಿರ್ಣಯ ತೆಗೆದುಕೊಂಡು ಮಾಧ್ಯಮಗಳಿಗೂ ಪ್ರಕಟಣೆ ಹೊರಡಿಸಿತ್ತು. ಇದಕ್ಕಾಗಿ ಕಂಬಳ ಸಮಿತಿ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದ್ದು, ಇದು ಕೇವಲ ಕಡತಕ್ಕೆ ಮಾತ್ರ ಸೀಮಿತವಾಗಿದೆ. ಕಂಬಳ ಆಯೋಜನೆ ವೇಳೆ ಯಾವ ನಿಯಮಗಳು ಅನುಷ್ಠಾನವಾಗದ ಕಾರಣ ಕಂಬಳ ಕೂಟಗಳು ಜಿಲ್ಲಾ ಕಂಬಳ ಸಮಿತಿ ಮತ್ತು ಸಂಘಟಕರ ನಿಯಂತ್ರಣದಲ್ಲಿ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
6 ಕಂಬಳಗಳಲ್ಲೇ ನರಿಂಗಾನ ಕಂಬಳ ಸುಮಾರು 46 ಗಂಟೆಗಳ ಕಾಲ ನಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ. ಇದಕ್ಕೆ ಮುಖ್ಯ ಕಾರಣ ಒಂದೆಡೆ ಕೋಣಗಳ ಸಂಖ್ಯೆ ಜಾಸ್ತಿಯಾಗಿದ್ದರೆ, ಇದಕ್ಕಿಂತಲೂ ಮುಖ್ಯ ಕಾರಣ ಕೋಣ ಬಿಡುವವರು, ರೆಫರಿಗಳು, ಕೋಣಗಳ ಮಾಲೀಕರು, ಕಂಬಳ ಸಂಘಟಕರ ಮಧ್ಯೆ ಸಮನ್ವಯತೆ ಕೊರತೆ. ಸಂಘಟಕರು ಸಭಾ ಕಾರ್ಯಕ್ರಮಕ್ಕೆ 2 ಗಂಟೆ ವಿನಿಯೋಗಿಸಿದರೆ, ಅದನ್ನೇ ಅಸ್ತ್ರವಾಗಿಸಿ ಕೋಣ ಬಿಡುವವರು, ಮಾಲೀಕರು ತಮ್ಮ ದರ್ಬಾರನ್ನು ಮುಂದುವರಿಸಿ ಕಂಬಳವನ್ನು ಮತ್ತಷ್ಟು ವಿಳಂಬ ಮಾಡಿದ್ದಾರೆ ಎನ್ನುತ್ತಾರೆ ಕಂಬಳಾಭಿಮಾನಿಗಳು.
ಈ ಸೀಸನ್‌ನಲ್ಲಿ ಒಟ್ಟು 6 ಕಂಬಳಗಳು ನಡೆದಿದ್ದು, ಇವುಗಳಲ್ಲಿ ಮಂಗಳೂರು ಕಂಬಳ ಮತ್ತು ಕೊಡಂಗೆ ಕಂಬಳ ಮಾತ್ರ 31 ಗಂಟೆಗೆ ಮುಗಿದಿದ್ದರೆ, ಉಳಿದ ಎಲ್ಲ ಕಂಬಳಗಳು ತೀರಾ ವಿಳಂಬವಾಗಿವೆ.
ಕಂಬಳ ಮೇಲೆ ಇನ್ನೂ ಪೇಟಾ ತನ್ನ ಕಣ್ಣು ಇಟ್ಟಿದೆ. ಈಗಾಗಲೇ ಬೆಂಗಳೂರು ಹಾಗೂ ಪಿಲಿಕುಳ ಕಂಬಳ ನಡೆಯದಂತೆ ಪೇಟಾ ತಡೆದಿದೆ. ಒಂದು ಶಿಸ್ತು ಬದ್ದವಾಗಿ ನಡೆಯಬೇಕಾದ ಕಂಬಳ ಇದೀಗ ಅವರವರ ಇಷ್ಟಕ್ಕೆ ನಡೆಯುತ್ತಿದೆ. ಇದು ದೃಶ್ಯ ಮಾಧ್ಯಮ ಮೂಲಕ ವೀಕ್ಷಣೆ ಮಾಡುವವರಿಗೆ ಹಾಗೂ ಸ್ಪರ್ಧೆ ನೇರ ವೀಕ್ಷಣೆ ಮಾಡುವವರು, ಕಂಬಳಾಭಿಮಾನಿಗಳಲ್ಲಿ ನಿರಾಶೆ ಮೂಡಿಸುವಂತಾಗಿದೆ.